ಪ್ರಧಾನ ಸುದ್ದಿ

ರಾಜ್ಯದ ಜನತೆ ಬಿಜೆಪಿಯನ್ನು ಮತ್ತೆ ಯಾವತ್ತೂ ಅಧಿಕಾರಕ್ಕೆ ತರಲ್ಲ: ಸಿಎಂ

Lingaraj Badiger
ಬೆಂಗಳೂರು: ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿರುವ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ‘ನಾಲ್ಕನೇ ವರ್ಷದೆಡೆಗೆ… ಭರವಸೆಯ ನಡಿಗೆ’ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮೂರು ವರ್ಷದ ಸಾಧನೆಗಳನ್ನು ಬಿಂಬಿಸುವ ಹಾಗೂ ಮುಂದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಳ್ಳಲಿರುವ ಕ್ರಮಗಳ ಕುರಿತು 140 ಪುಟಗಳ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. 
ಬಳಿಕ ಮಾತನಾಡಿದ ಸಿಎಂ, ಮೂರು ವರ್ಷದ ಅಧಿಕಾರ ತೃಪ್ತಿ ತಂದಿದೆ. ಕಾಂಗ್ರೆಸ್ ಅಧಿಕಾರಕ್ಕೆರುವ ಸಂದರ್ಭದಲ್ಲಿ ಜನತೆಗೆ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 120 ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು. ಅಲ್ಲದೆ ಪ್ರಜಾಪ್ರಭುತ್ವದ ಧರ್ಮ ಪಾಲಿಸಿದ್ದೇವೆ. ಆಡಳಿತ ನಡೆಸುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಂದೆರಗುವ ಸಮಸ್ಯೆಗಳಿಗೆ ನಾಡಿನ ಜನತೆಯ ನಿರೀಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇವೆ. ರಾಜ್ಯದ ಬಹುತೇಕ ಭಾಗ ಬರಗಾಲವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಜನತೆಯ ಜತೆಗಿದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿಪಕ್ಷ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ, ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲ್ಲ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ನಮ್ಮದು ಅಂಜದ, ಹೆದರದ ಸರ್ಕಾರ. ನಾವು ಯಾವುದೇ ಭ್ರಷ್ಟಾಚಾರ ಎಸಗಿಲ್ಲ. ನಮ್ಮ ಮೇಲೆ ರಾಜಕೀಯ ಪ್ರೇರಿತವಾಗಿ ಬಿಜೆಪಿಯವರು ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಜೈಲಿಗೆ ಹೋಗಿಲ್ಲ, ಬೇಲ್ ಪಡೆದಿಲ್ಲ ಎಂದು ತಿರುಗೇಟು ನೀಡಿದರು.
SCROLL FOR NEXT