ಇಸ್ಲಮಾಬಾದ್: ಭಾರತ ಭಾನುವಾರ ನಡೆಸಿದ ಸೂಪರ್ಸಾನಿಕ್ ಬೇಧಕ ಕ್ಷಿಪಣಿ ಪರೀಕ್ಷೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ, ಪಾಕಿಸ್ತಾನ ಪ್ರಧಾನಮಂತ್ರಿಯವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಜ್ ಅಜೀಜ್, ಅಂತರಾಷ್ಟ್ರೀಯ ವೇದಿಕೆಯಲ್ಲಿ ಈ ಬೆಳವಣಿಗೆಯನ್ನು ಪ್ರಶ್ನಿಸಲಿದ್ದೇವೆ ಎಂದು ಸೋಮವಾರ ಹೇಳಿದ್ದಾರೆ.
ಈ ಭಾಗದಲ್ಲಿ ರಾಜಕೀಯ ಶಕ್ತಿಯ ಸಮತೋಲನಕ್ಕೆ ಭಾರತ ನಡೆಸಿದ ಕ್ಷಿಪಣಿ ಪರೀಕ್ಷೆ ಧಕ್ಕೆ ತರಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅಜೀಜ್, ಉನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ಪಾಕಿಸ್ತಾನ ಕೂಡ ತನ್ನ ರಕ್ಷಣಾ ತಂತ್ರಜ್ಞಾನವನ್ನು ವೃದ್ಧಿಸಿಕೊಳ್ಳಲಿದೆ ಎಂದು ಅಜೀಜ್ ಹೇಳಿರುವುದಾಗಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಚೈನಾವನ್ನು ಹತ್ತಿಕ್ಕಲು ಶಕ್ತಿಯುತ ಭಾರತದ ಅಗತ್ಯವಿದೆ ಎಂದು ವಾಶಿಂಗ್ಟನ್ ನ ಅಭಿಮತವಾಗಿರುವುದರಿಂದ ಭಾರತ ಅಮೆರಿಕಾದ ಸಹಕಾರವನ್ನು ಬಳಸಿಕೊಳ್ಳುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ವಿರುದ್ಧ ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸುವುದಾಗಿ ಕೂಡ ಅವರು ಹೇಳಿದ್ದಾರೆ.
ಭಾನುವಾರ ಒರಿಸ್ಸಾದ ಬಂದರಿನಿಂದ, ದೇಶದಲ್ಲೇ ಅಭಿವೃದ್ಧಿ ಪಡಿಸಲಾಗಿರುವ, ಒಳಬರುವ ಯಾವುದೇ ಬ್ಯಾಲ್ಲಿಸ್ಟಿಕ್ ಕ್ಷಿಪಣಿಯನ್ನು ಬೇಧಿಸಿ ನಾಶ ಮಾಡುವ ಶಕ್ತಿಯಿರುವ ಸೂಪರ್ಸಾನಿಕ್ ಬೇಧಕ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಬಾರತ ನಡೆಸಿತ್ತು.