ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕ್ ನಿಂದ ಮಹಾರಾಷ್ಟ್ರದ ಬಿಜೆಪಿ ಮುಖಂಡ, ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರಿಗೆ ಅತೀ ಹೆಚ್ಚು ಬಾರಿ ಕರೆ ಮಾಡಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿರುವ ಮುಂಬೈ ಪೊಲೀಸರು, ಖಾಡ್ಸೆ ಅವರಿಗೆ ದಾವೂದ್ ನಿಂದ ಯಾವುದೇ ಕಾಲ್ ಬಂದಿಲ್ಲ ಮತ್ತು ಅವರೂ ಕಾಲ್ ಮಾಡಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.
2015ರಿಂದ 2016ರವರೆಗೆ ಏಕನಾಥ್ ಖಾಡ್ಸೆ ಅವರ ಮೊಬೈಲ್ ನಿಂದ ದಾವೂದ್ ಯಾವುದೇ ಕರೆ ಹೋಗಿಲ್ಲ ಮತ್ತು ಬಂದಿಲ್ಲ ಎಂಬುದು ನಾವು ನಡೆಸಿದ ಆಂತರಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಆಯುಕ್ತ ಅತುಲ್ ಚಂದ್ರ ಕುಲಕರ್ಣಿ ಅವರು ಹೇಳಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಎಎಪಿ ನಾಯಕಿ ಪ್ರೀತಿ ಶರ್ಮಾ ಮೆನೋನ್ ಅವರು, ಮಹಾರಾಷ್ಟ್ರ ಸಚಿವರು ದಾವೂದ್ ಇಬ್ರಾಹಿಂನಿಂದ ಬಂದ ಕಾಲ್ ಗಳನ್ನು ಹಲವು ಬಾರಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ತಳ್ಳಿಹಾಕಿದ್ದ ಖಾಡ್ಸೆ, ಎಎಪಿ ನಾಯಕಿಯ ಆರೋಪ ಆಧಾರ ರಹಿತ, ಆ ಮೊಬೈಲ್ ನಂಬರ್ ಅನ್ನು ಕಳೆದ ಒಂದು ವರ್ಷಗಳನ್ನು ನಾನು ಬಳಸುತ್ತಿಲ್ಲ ಎಂದಿದ್ದರು.
ಇನ್ನು ವಡೋದರಾ ಮೂಲದ ಹ್ಯಾಕರ್ ಮನೀಶ್ ಭಾಂಗಾಲೆ ಸಂಗ್ರಹಿಸಿದ್ದ ಮಾಹಿತಿಯನ್ನು ಪ್ರಸಾರ ಮಾಡಿದ್ದ ಇಂಡಿಯಾ ಟುಡೇ, ಭೂಗತ ಪಾತಕಿ ಯಾವೆಲ್ಲ ಮೊಬೈಲ್ ನಂಬರ್ ಗಳಿಂದ ಭಾರತಕ್ಕೆ ಕರೆ ಮಾಡಿದ್ದ ಎಂಬುದನ್ನು ವಿವಿರಿಸತ್ತು. ಭಾಂಗಾಲೆ ದಾವೂದ್ ಪತ್ನಿ ಮೆಹಜಬೀನ್ ಶೇಕ್ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದ್ದ 4 ಫೋನ್ ಗಳ ವಿವರಗಳನ್ನು ಹ್ಯಾಕ್ ಮಾಡಿ ಸಂಗ್ರಹಿಸಿದ್ದರು. ಇದರಲ್ಲಿ ಅತೀ ಹೆಚ್ಚು ಬಾರಿ ಬಿಜೆಪಿ ಮುಖಂಡ ಖಾಡ್ಸೆಗೆ ಕರೆ ಮಾಡಿರುವುದಾಗಿ ವರದಿ ಹೇಳಿತ್ತು.