ಆಸ್ಕರ್ ಫರ್ನಾಂಡಿಸ್ ಮತ್ತು ಜೈರಾಂ ರಮೇಶ್
ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಶನಿವಾರ ರಾಜ್ಯಸಭೆಗೆ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಕರ್ನಾಟಕದಿಂದ ಆಸ್ಕರ್ ಫರ್ನಾಂಡಿಸ್ ಮತ್ತು ಜೈರಾಂ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.
ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದ್ದರು. ಅಲ್ಲದೆ ಕಾಂಗ್ರೆಸ್‌ನಿಂದ ಮೂರನೇ ಅಭ್ಯರ್ಥಿಯಾಗಿ ರಾಮಮೂರ್ತಿ ಮತ್ತು ಜೆಡಿಎಸ್‌ನ ರಾಜ್ಯಸಭಾ ಅಭ್ಯರ್ಥಿಯಾಗಿ ಬಿ.ಎ. ಫರೂಕ್ ಅವರು ಕಣಕ್ಕಿಳಿಯಲಿದ್ದಾರೆ ಎಂದು ವರದಿ ಮಾಡಲಾಗಿತ್ತು.
ಕಾಂಗ್ರೆಸ್ ತನ್ನ ಹೆಚ್ಚುವರಿ ಮತಗಳಾದ 32, ಪಕ್ಷೇತರರಿಂದ 9 ಹಾಗೂ ಜೆಡಿಎಸ್ ಭಿನ್ನಮತೀಯರ ಐದು ಮತಗಳನ್ನು ನಂಬಿಕೊಂಡು ರಾಮಮೂರ್ತಿ ಅವರನ್ನು ಕಣಕ್ಕಿಳಿಸಲು ಮುಂದಾಗಿತ್ತು.
ಇನ್ನು ಎಐಸಿಸಿ ಪಟ್ಟಿಯಿಂದ ಮೂರನೇ ಅಭ್ಯರ್ಥಿಯನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಈ ಕ್ಷಣದವರೆಗೂ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆದಿತ್ತು. ಆದರೆ ಮುಂದೆ ಏನಾಗುತ್ತದೋ ಗೊತ್ತಿಲ್ಲ. ಹೈಕಮಾಂಡ್ ಬೇಡ ಎಂದರೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದಿದ್ದಾರೆ.
ಎಐಸಿಸಿ ಪ್ರಕಟಿಸಿರುವ 8 ಅಭ್ಯರ್ಥಿಗಳ ಪಟ್ಟಿ
ಕರ್ನಾಟಕದಿಂದ ಆಸ್ಕರ್ ಫರ್ನಾಂಡಿಸ್ ಮತ್ತು ಜೈರಾಂ ರಮೇಶ್
ಉತ್ತರ ಪ್ರದೇಶದಿಂದ ಕಪಿಲ್ ಸಿಬಲ್
ಮಹಾರಾಷ್ಟ್ರದಿಂದ ಪಿ.ಚಿದಂಬರಂ
ಉತ್ತರಾಖಂಡ್ ನಿಂದ ಪ್ರದೀಪ್ ತಮ್ಟಾ
ಮಧ್ಯಪ್ರದೇಶದಿಂದ ವಿವೇಕ್ ತನ್ಖಾ
ಛತ್ತೀಸ್ ಗಡದಿಂದ ಛಾಯಾ ವರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics