ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ನಾಲ್ಕು ಹಂತದ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ಗುರುವಾರ ನಿರ್ಧರಿಸಿದ್ದು, ಕನಿಷ್ಠ ಶೇ.5ರಿಂದ ಗರಿಷ್ಠ ಶೇ.28ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಆಹಾರ ಧಾನ್ಯಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ.
ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಕನಿಷ್ಠ ತೆರಿಗೆ ದರ ಉದ್ದೇಶಿಸಿತ ಶೇ,6ರಷ್ಟು ಬದಲು 5ರಷ್ಟು ಹಾಗೂ ಗರಿಷ್ಠ ಉದ್ದೇಶಿತ ತೆರಿಗೆ ಶೇ.26ರ ಬದಲು 28ರಷ್ಟು ತೆರಿಗೆ ವಿಧಿಸಲು ಒಪ್ಪಿಗೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರ ಒಟ್ಟು ನಾಲ್ಕು ಹಂತದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುತ್ತಿದ್ದು, ವಿವಿಧ ವಸ್ತುಗಳ ಮೇಲೆ ಶೇ,5, ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಸಭೆಯ ನಂತರ ಅರುಣ್ ಜೇಟ್ಲಿ ಅವರು ಪ್ರಕಟಿಸಿದ್ದಾರೆ.
ಗ್ರಾಹಕ ಸಂವೇದಿ ಸೂಚ್ಯಂಕದಲ್ಲಿರುವ(CPI) ಶೇ 50ರಷ್ಟು ವಸ್ತುಗಳು ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಅದರಲ್ಲಿ ಜನಸಾಮಾನ್ಯರು ಬಳಸುವ ಆಹಾರಧಾನ್ಯಗಳು ಒಳಗೊಂಡಿವೆ. ಇನ್ನು ಶೇ 5ರ ದರವನ್ನು ಸಾಮಾನ್ಯ ಜನರು ಸಾಮೂಹಿಕವಾಗಿ ಬಳಸುವ ವಸ್ತುಗಳ ಮೇಲೆ ಹಾಕಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಐಷಾರಾಮಿ ಕಾರು, ತಂಬಾಕು ಇತರ ವಸ್ತುಗಳಿಗೆ ಕ್ಲೀನ್ ಎನರ್ಜಿ ಸೆಸ್ ಜತೆಗೆ ಸೆಸ್ ಹಾಕಲಾಗಿದ್ದು, ಆದಾಯದಲ್ಲಿ ನಷ್ಟವಾಗುವ ರಾಜ್ಯಗಳಿಗೆ ಪರಿಹಾರವಾಗಿ ನೀಡಲಾಗುವುದು. ಈ ರೀತಿಯ ಪರಿಹಾರ ರೂಪದ ಸೆಸ್ ಮುಂದಿನ ಐದು ವರ್ಷಗಳ ಕಾಲ ಇರುತ್ತದೆ. ಜಿಎಸ್ ಟಿ ಜಾರಿಯಾದ ಮೊದಲ ವರ್ಷ ರಾಜ್ಯಗಳ ಆದಾಯದಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು 50 ಸಾವಿರ ಕೋಟಿ ಪಾವತಿಸಬೇಕಾಗುತ್ತದೆ ಎಂದು ಜೇಟ್ಲಿ ಹೇಳಿದರು.
ಏಪ್ರಿಲ್ 1, 2017ರಿಂದ ಈ ಜಿಎಸ್ ಟಿಯ ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದೆ.