ವಿಜಯ್ ಮಲ್ಯ ವಿರುದ್ಧ 2ನೇ ಜಾಮೀನು ರಹಿತ ವಾರಂಟ್ ಜಾರಿ
2012ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಉದ್ಯಮಿ ವಿಜಯ್ ಮಲ್ಯ ...
ನವದೆಹಲಿ: 2012ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಒಂದೇ ದಿನದಲ್ಲಿ ಎರಡನೇ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸುಮೀತ್ ಆನಂದ್ ಅವರು ಪದೇ ಪದೇ ಸಮನ್ಸ್ಗಳಿಂದ ತಪ್ಪಿಸಿಕೊಳ್ಳುತ್ತಿರುವ ವಿಜಯ್ ಮಲ್ಯ ವಿರುದ್ಧ ಎರಡನೇ ವಾರಂಟ್ ಜಾರಿಗೊಳಿಸಿದ್ದು, ವಿದೇಶಾಂಗ ಸಚಿವಾಲಯದ ಮೂಲಕ ಇದನ್ನು ಜಾರಿಗೊಳಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದಿನ ವರ್ಷ ಫೆಬ್ರವರಿ 4ಕ್ಕೆ ಮುಂದೂಡಿದ್ದಾರೆ.
ಕೋರ್ಟ್ ಇಂದು ಬೆಳಗ್ಗೆಯಷ್ಟೇ ಮದ್ಯದ ದೊರೆಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಅಲ್ಲದೆ ಇದೇ ಪ್ರಕರಣ ಸಂಬಂಧ ಈ ಹಿಂದೆ ಆಗಸ್ಟ್ 6ರಂದು ಸಹ ವಾರಂಟ್ ಜಾರಿಗೊಳಿಸಿತ್ತು. ಆದರೆ ಪದೇ ಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಮಲ್ಯ ಅವರನ್ನು ಬಂಧಿಸಿ, ಕರೆತರುವಂತೆ ಕೋರ್ಟ್ ಸೂಚಿಸಿದೆ.
ಮಲ್ಯ ಮಾಲೀಕತ್ವದ ಕಿಂಗ್ ಫಿಶರ್ ಏರ್ ಲೈನ್ಸ್ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀಡಿದ್ದ ಒಂದು ಕೋಟಿ ರುಪಾಯಿ ಚೆಕ್ ಬೌನ್ಸ್ ಆಗಿದ್ದು, ಈ ಸಂಬಂಧ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಲ್ಯ ವಿರುದ್ಧ ಕೇಸ್ ದಾಖಲಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.