ಬ್ರಿಟನ್ ಪ್ರಧಾನಿಯೊಂದಿಗೆ ಸಿಎಂ
ಬೆಂಗಳೂರು: ಬ್ರಿಟನ್ ಸರ್ಕಾರ ಜಾರಿಗೆ ತಂದಿರುವ ಹೊಸ ವೀಸಾ ನಿರ್ಬಂದಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಹೊಸ ವೀಸಾ ನೀತಿಯನ್ನು ಪರಿಶೀಲಿಸುವಂತೆ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.
ತೆರೆಸಾ ಮೇ ಅವರು ಒಂದು ದಿನದ ಭೇಟಿಗಾಗಿ ಇಂದು ನಗರಕ್ಕೆ ಆಗಮಿಸಿದ್ದು, ಸಿಲಿಕಾನ್ ಸಿಟಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಂದು ಸಂಜೆ ದೆಹಲಿಗೆ ವಾಪಸ್ ಆಗಲಿದ್ದಾರೆ.
ಬೆಳಗ್ಗೆ 10:30ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬ್ರಿಟನ್ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಿತರ ಗಣ್ಯರು ಬ್ರಿಟನ್ ಪ್ರಧಾನಿಗೆ ಹೂಗುಚ್ಛ ನಿಡಿ ಭವ್ಯ ಸ್ವಾಗತ ಕೋರಿದರು. ಥೆರೆಸಾ ಮೇ ಅವರಿಗೆ ಸಂಪ್ರದಾಯಬದ್ಧವಾಗಿ ಕಳಸ ನೀಡಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಶೇಷವಾಗಿ ವಿಮಾನನಿಲ್ದಾಣದಲ್ಲಿ ಸ್ವಾಗತಿಸಿದರು.
ಬಳಿಕ ವಿಮಾನ ನಿಲ್ದಾಣ ಸಮೀಪವಿರುವ ತಾಜ್ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಹಾಗೂ ತೆರೆಸಾ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ವೀಸಾ ಶುಲ್ಕ ಕಡಿಮೆ ಮಾಡುವುದು, ವೀಸಾ ನಿಯಮಾವಳಿ ಸಡಿಲಿಕೆ, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಚರ್ಚೆ ಸಿಎಂ ಬ್ರಿಟನ್ ಪ್ರಧಾನಿಯೊಂದಿಗೆ ಚರ್ಚಿಸಿದರು ಎನ್ನಲಾಗಿದೆ.
ಹೆಚ್ಚುತ್ತಿರುವ ವಲಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಬ್ರಿಟನ್ ಸರ್ಕಾರವು ತನ್ನ ಯುರೋಪೇತರ ರಾಷ್ಟ್ರಗಳ ನಾಗರಿಕರ ವೀಸಾ ನೀತಿಯಲ್ಲಿ ಬದಲಾವಣೆ ಮಾಡಿದ್ದು, ಇದರಿಂದ ಅಪಾರ ಸಂಖ್ಯೆಯ ಭಾರತೀಯ ಐಟಿ ಉದ್ಯೋಗಿಗಳಿಗೆ ತೊಂದರೆ ಉಂಟಾಗಲಿದೆ. ‘ಟೈರ್–2’ ವೀಸಾದಡಿ ಕಂಪೆನಿಯೊಳಗಿನ ವರ್ಗಾವಣೆ (ಐಸಿಟಿ) ವಿಭಾಗದಲ್ಲಿ ನವೆಂಬರ್ 24ರ ಬಳಿಕ ಅರ್ಜಿ ಸಲ್ಲಿಸುವವರು ರು,25 ಲಕ್ಷ (30 ಸಾವಿರ ಪೌಂಡ್‌ನಷ್ಟು) ವೇತನ ಹೊಂದಿರುವುದು ಕಡ್ಡಾಯವಾಗಲಿದೆ. ಇದುವರೆಗೂ ಈ ಮಿತಿ ರು,17 ಲಕ್ಷರಷ್ಟಿತ್ತು. (ಸುಮಾರು 20,800 ಪೌಂಡ್).
ಥೇರೆಸಾ ಮೇ ಅವರು ಬೆಂಗಳೂರು ಭೇಟಿ ನಿಮಿತ್ತ ಸಾವಿರ ವರ್ಷದಷ್ಟು ಹಳೆಯದಾದ ಹಲಸೂರು ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಜತೆಗೆ ಸ್ಟೋನ್ ಹಿಲ್ ಇಂಟರ್ ನ್ಯಾಷನಲ್ ಸ್ಕೂಲ್ ದತ್ತು ತೆಗೆದುಕೊಂಡಿರುವ ಸರ್ಕಾರಿ ಶಾಲೆಗೂ ಅವರು ಭೇಟಿ ನೀಡಲಿದ್ದಾರೆ. ತೆರೆಸಾ ಮೇ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಸೋಮೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಿದ್ದಾರೆ.