ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ
ನವದೆಹಲಿ: ಭಾರತದ ನೋಟುಗಳ ಮುದ್ರಣವನ್ನು, ಪಾಕಿಸ್ತಾನದ ನೋಟುಗಳನ್ನು ಕೂಡ ಮುದ್ರಿಸುವ ಬ್ರಿಟಿಷ್ ಸಂಸ್ಥೆಯೊಂದಕ್ಕೆ ಒಪ್ಪಂದ ನೀಡಿದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಬೇಜವಾಬ್ದಾರಿತನವೇ, ದೇಶದಲ್ಲಿ ಖೋಟಾ ನೋಟಿನ ಚಲಾವಣೆ ಹೆಚ್ಚಿದ್ದಕ್ಕೆ ಕಾರಣ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯನ್ನು ಕಾಪಾಡಿ, ಭಯೋತ್ಪಾದನೆಗೆ ದೊಡ್ಡ ಪೆಟ್ಟು ನೀಡುವಲ್ಲಿ ನರೇಂದ್ರ ಮೋದಿ ಸರ್ಕಾರ 1000 ಮತ್ತು 500 ರೂ ಮೌಲ್ಯದ ನೋಟುಗಳನ್ನು ಹಿಂದಕ್ಕೆ ಪಡೆಯುತ್ತಿರುವ ಕ್ರಮ ದೊಡ್ಡ ರೀತಿಯಲ್ಲಿ ಸಹಕರಿಸಲಿದೆ ಎಂದು ಸುಬ್ರಮಣ್ಯಸ್ವಾಮಿ ಹೇಳಿದ್ದಾರೆ.
"ನಾನು ನರೇಂದ್ರ ಮೋದಿ ಅವರ ಈ ಕ್ರಮವನ್ನು ಸ್ವಾಗತಿಸುತ್ತೇನೆ. ರಾಷ್ಟ್ರೀಯ ಭದ್ರತೆಗೆ ಇದು ಬಹಳ ಅವಶ್ಯಕವಾಗಿತ್ತು. ಕಪ್ಪು ಹಣವನ್ನು ಕೊನೆಗಾಣಿಸಲು ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಸ್ವಾಮಿ ಹೇಳಿದ್ದಾರೆ.
"ಆದರೆ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಇದು ಮಾರಣಾಂತಿಕ ಹೊಡೆತ ಏಕೆಂದರೆ ಭಯೋತ್ಪಾದನೆಯ ಸಂಪೂರ್ಣ ಪ್ರಾಯೋಜತ್ವ ನಡೆಯುವುದು ಖೋಟಾ ನೋಟುಗಳಿಂದ" ಎಂದು ಸ್ವಾಮಿ ಹೇಳಿದ್ದಾರೆ.
"ಇದೆಲ್ಲ ಪ್ರಾರಂಭವಾಗಿದ್ದು ಚಿದಂಬರಂ ವಿತ್ತ ಸಚಿವರಾಗಿದ್ದಾಗ. ಬ್ರಿಟಿಷ್ ಸಂಸ್ಥೆ ಲಂಡನ್ನಿನ ಡೇ ಲ ರಿಯೂಗೆ ಅವರು ನೋಟುಗಳನ್ನು ಮುದ್ರಿಸುವ ಒಪ್ಪಂದ ನೀಡಿದ್ದರು. ಈ ಸಂಸ್ಥೆ ಪಾಕಿಸ್ತಾನದ ನೋಟುಗಳನ್ನು ಕೂಡ ಮುದ್ರಿಸುತ್ತದೆ. ಕಾಶ್ಮೀರದ ಗಲಭೆಯೆಲ್ಲಾ ಪಾಕಿಸ್ತಾನದಿಂದ ಬರುವ ಖೋಟಾ ನೋಟುಗಳಿಂದ ಪ್ರಾಯೋಜತ್ವ ಪಡೆಯುತ್ತದೆ" ಎಂದು ಸ್ವಾಮಿ ಹೇಳಿದ್ದಾರೆ.