ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಹೊಸ 1000 ರು. ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂದು ಕೇಂದ್ರ ವಿತ್ತ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ನೋಟ್ ನಿಷೇಧ ಕುರಿತಂತೆ ಇಂದು ದೆಹಲಿಯಲ್ಲಿ ವಿತ್ತ ಸಚಿವಾಲಯ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ವಿತ್ತ ಸಚಿವಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದು, ಈ ವೇಳೆ ನೋಟ್ ಬದಲಾವಣೆ ಕುರಿತಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಅಂತೆಯೇ ಹೊಸ 1000ರು. ಮುಖಬೆಲೆಯ ನೋಟ್ ಅನ್ನು ಕೂಡ ಶೀಘ್ರದಲ್ಲೇ ಚಲಾವಣೆಗೆ ತರುವ ಕುರಿತು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.
ವಿತ್ತ ಸಚಿವಾಲಯದ ಮೂಲಗಳ ಪ್ರಕಾರ ಪ್ರಸ್ತುತ ನಿಷೇಧಕ್ಕೊಳಗಾಗಿರುವ 1000 ರು. ಮುಖಬೆಲೆಯ ನೋಟಿಗೆ ಬದಲಾಗಿ ಅದೇ ಪ್ರಮಾಣದ ಹೊಸ ಮಾದರಿಯ ನೋಟ್ ಗಳನ್ನು ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಕೇಂದ್ರ ವಿತ್ತ ಸಚಿವಾಲಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೊಸ ಮಾದರಿಯ ಭದ್ರತಾ ಅಂಶಗಳೊಂದಿಗೆ ಹೊಸ 1000 ರು.ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ ಎಂದು ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಮತ್ತು ನುರಿತ ಆರ್ಥಿಕ ತಜ್ಞ ಶಕ್ತಿಕಾಂತ್ ದಾಸ್ ಅವರು, ಹೊಸ ಭದ್ರತಾ ಆಂಶಗಳೊಂದಿಗೆ ಹೊಸ 1000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ. ಈಗಾಗಲೇ ಇದರ ಕಾರ್ಯ ಆರಂಭವಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಚಲಾವಣೆಗೆ ತರುತ್ತೇವೆ ಎಂದು ಹೇಳಿದ್ದಾರೆ.
ಜಿಎಸ್ ಟಿ ಜಾರಿಯಲ್ಲಿನ ಸಮಸ್ಯೆಗೆ ಶೀಘ್ರ ಪರಿಹಾರ; ಏಪ್ರಿಲ್ 1ಕ್ಕೆ ಜಾರಿಗೊಳಿಸಲು ಸಕಲ ಸಿದ್ಧತೆ: ಅರುಣ್ ಜೇಟ್ಲಿ
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ಜಿಎಸ್ ಟಿ ಜಾರಿಗೆ ತರುವುದೇ ನಮ್ಮ ಸರ್ಕಾರದ ಮೊದಲ ಆಧ್ಯತೆಯಾಗಿದೆ. ಪ್ರಸ್ತುತ ಯೋಜನೆ ಜಾರಿಗಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂಬರುವ ಏಪ್ರಿಲ್ 1ರ ವೇಳೆಗೆ ಜಿಎಸ್ ಟಿ ಜಾರಿಗೆ ತರಲು ಸಕಲ ಪ್ರಯತ್ನ ನಡೆಸುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತುತ ಸಮಸ್ಯೆ ಕುರಿತು ಮಾತನಾಡಿದ ಅವರು, ಭವಿಷ್ಯದ ದೃಷ್ಟಿಯಿಂದ ಪ್ರಸ್ತುತ ಕೆಲ ದಿನಗಳ ವರೆಗಿನ ಸಮಸ್ಯೆಯನ್ನು ತಡೆದುಕೊಳ್ಳಬೇಕಿದೆ. ಆದರೆ ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ ಎಂದು ಹೇಳಿದರು.
"ಕೆಲವು ದಿನಗಳ ವರೆಗೂ ಜನತೆ ತಮಗೆ ತೊಂದರೆಯಾಗುತ್ತಿದೆ ಎಂದು ಭಾವಿಸಬಹುದು. ಆದರೆ ಭವಿಷ್ಯದ ದಿನಗಳಲ್ಲಿ ಸರ್ಕಾರದ ನಿರ್ಧಾರದಿಂದಾಗಿ ಜನತೆಗೆ ಲಾಭವಾಗಲಿದೆ. ಪ್ರಸ್ತುತ ನಿರ್ಧಾರದಿಂದಾಗಿ ಸಣ್ಣ ವಹಿವಾಟುಗಳಿಗೆ ಹಾಗೂ ಸಣ್ಣ ಪ್ರಮಾಣದ ಮಾರಾಟಗಾರರಿಗೆ ಖಂಡಿತ ತೊಂದರೆಯಾಗಿದೆ. ಆದರೆ ಈ ಸಮಸ್ಯೆ ಶಾಶ್ವತವಲ್ಲ. ಈಗಾಗಲೇ ಬದಲಿ ನೋಟುಗಳ ವ್ಯವಸ್ಥೆ ಮಾಡಲಾಗಿದ್ದು, ಜನ ತಮ್ಮ ಹಳೆಯ ನೋಟುಗಳಿಗೆ ಹೊಸ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಜನ ಬ್ಯಾಂಕುಗಳಿಗೆ ಮುಗಿಬೀಳುವ ಅವಶ್ಯಕತೆ ಇಲ್ಲ. ಹಣ ಬದಲಾವಣೆಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು, ಜನತೆ ಕಂಗಾಲಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ರಾಹುಲ್ ಗಾಂಧಿ ಟೀಕೆಗೆ ಜೇಟ್ಲಿ ತಿರುಗೇಟು
ಇದೇ ವೇಳೆ ನೋಟ್ ನಿಷೇಧದಿಂದ ಕಪ್ಪುಹಣ ನಿಯಂತ್ರಿಸಲು ಹೇಗೆ ಸಾಧ್ಯ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಿದ ಅರುಣ್ ಜೇಟ್ಲಿ ಅವರು, ರಾಹುಲ್ ಅವರು ತಲೆ ಉಪಯೋಗಿಸಿ ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಅದಕ್ಕೆ ತಕ್ಕಂತೆ ಮಾತನಾಡಬೇಕು. ಪ್ರಸ್ತುತ ಸರ್ಕಾರದ ನಡೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿಲ್ಲ. ಬದಲಿಗೆ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಕಳ್ಳಗಂಟು ಇಟ್ಟುಕೊಂಡಿರುವ ಕಾಳಧನಿಕರಿಗೆ ತೊಂದರೆಯಾಗಿದೆ, ನ್ಯಾಯಯುತವಾಗಿ ಹಣ ಸಂಪಾದಿಸಿದ ದೇಶದ ಯಾವುದೇ ಪ್ರಜೆಗೂ ಕೂಡ ತೊಂದರೆಯಾಗಿಲ್ಲ ಎಂದು ತಿರುಗೇಟು ನೀಡಿದರು.