ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು
ಬೆಂಗಳೂರು: ರಾಜ್ಯಾದ್ಯಂತ ಬಿಜೆಪಿ ಹಾಗೂ ಸಂಘ ಪರಿವಾರದ ತೀವ್ರ ಪ್ರತಿಭಟನೆಯ ನಡುವೆಯೂ ರಾಜ್ಯ ಸರ್ಕಾರ ಗುರುವಾರ ಟಿಪ್ಪು ಜಯಂತಿಯನ್ನು ಆಚರಿಸಿದೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾತಿಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜಕೀಯ ಲಾಭಕ್ಕಾಗಿ, ಮುಸ್ಲಿಮರನ್ನು ಒಲೈಸುವುದಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿಲ್ಲ ಮತ್ತು ಇದರ ಹಿಂದೆ ಮತ ಬ್ಯಾಂಕ್ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮತ್ತೊಂದೆಡೆ ಮೈಸೂರು, ಮಂಗಳೂರು, ಮಡಿಕೇರಿ, ತುಮಕೂರು, ಹಾಸನ, ಕೊಪ್ಪಳ ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದೆ.
ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಯಿತು.
ಶಿವಮೊಗ್ಗ, ಉಡುಪಿ, ಧಾರವಾಡ, ವಿಜಯಪುರ, ಮೈಸೂರು, ಮಂಗಳೂರು, ಮಡಿಕೇರಿ, ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು, ಮಡಿಕೇರಿ, ಉಡುಪಿ, ಬೆಂಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.