ಮೋದಿ ಇವೆಲ್ಲವನ್ನೂ ಮಾಡಿದ್ರೆ ಅವರ ಪಾದ ಪೂಜೆ ಮಾಡ್ತೇನೆ: ಕಾಂಗ್ರೆಸ್ ಶಾಸಕ
ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿದ್ದು ಒಳ್ಳೆಯ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ...
ಬೆಂಗಳೂರು: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿದ್ದು ಒಳ್ಳೆಯ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿಜಿ ಶಾಂತನಗೌಡ ಅವರು, ಕೇವಲ ಅದೊಂದೇ ಅಲ್ಲ. ಇನ್ನು ಸಾಕಷ್ಟು ಬದಲಾವಣೆಯಾಗಬೇಕಿದೆ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ನೋಟ್ ನಿಷೇಧದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಶಾಂತನಗೌಡ ಅವರು, ನೋಟ್ ನಿಷೇಧ ಮಾಡಿದ್ದು ಒಳ್ಳೆಯದೇ ಆಯ್ತು. ಆದರೆ ಜನಾರ್ದನ ರೆಡ್ಡಿ ರೀತಿ ಅದ್ದೂರಿ ಮದುವೆ ಮಾಡುವಂತಿಲ್ಲ, ಐಶಾರಾಮಿ ಕಾರು ಕೊಳ್ಳುವಂತಿಲ್ಲ, 5 ತೊಲ ಬಂಗಾರಕ್ಕಿಂತ ಹೆಚ್ಚು ಬಂಗಾರ ಹೊಂದುವಂತಿಲ್ಲ ಹಾಗೂ 5 ಎಕರೆಗಿಂತ ಹೆಚ್ಚು ಜಮೀನು ಹೊಂದುವಂತಿಲ್ಲ ಎಂಬ ಕಾನೂನು ತರಲಿ ಎಂದರು. ಅಲ್ಲದೆ ಇವೆಲ್ಲವನ್ನೂ ಮಾಡಿದರೆ ನಾನು ಮೋದಿ ಅವರ ಪಾದ ಪೂಜೆ ಮಾಡುತ್ತೇನೆ. ಅವರ ಪ್ರತಿಮೆ ನಮ್ಮ ಮನೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತೇನೆ ಎಂದಿದ್ದಾರೆ.
ನವೆಂಬರ್ 8ರಂದು ದಿಢೀರ್ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಲಾಗಿದೆ ಎಂದು ಘೋಷಿಸಿದ್ದರು. ಅಂದಿನಿಂದ ದೇಶಾದ್ಯಂತ ಹಣಕಾಸಿನ ತಾತ್ಕಾಲಿಕ ತರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನ ಎಟಿಎಂ ಹಾಗೂ ಬ್ಯಾಂಕ್ ಮುಂದೆ ನೋಟ್ ವಿನಿಮಯ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.