ಪ್ರಧಾನ ಸುದ್ದಿ

ನೋಟು ರದ್ದತಿ; ಸಹಕಾರ ನೀಡುವುದನ್ನು ಪರಿಶೀಲಿಸುತ್ತೇವೆ ಎಂದ ಪ್ರಮುಖ ಬ್ಯಾಂಕ್ ಒಕ್ಕೂಟ

Guruprasad Narayana
ಚೆನ್ನೈ: ಬ್ಯಾಂಕ್ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಿದರೆ ಕೇಂದ್ರ ಸರ್ಕಾರದ ನೋಟು ಹಿಂಪಡೆದ ನಿರ್ಧಾರಕ್ಕೆ ನೀಡಿರುವ ಸಹಕಾರವನ್ನು ಮುಂದುವರೆಸುವುದರ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಪ್ರಮುಖ ಬ್ಯಾಂಕ್ ನೌಕರರ ಒಕ್ಕೂಟ ಎಚ್ಚರಿಸಿದೆ. 
"ಸಿಬ್ಬಂದಿಗಳ ಮೇಲೆ ಅನಗತ್ಯ ಒತ್ತಡ ಮತ್ತು ಕೆಲಸ ಹೆಚ್ಚಿದರೆ ಕೇಂದ್ರ ಸರ್ಕಾರದ ನೋಟು ಹಿಂಪಡೆದ ನಿರ್ಧಾರಕ್ಕೆ ನೀಡಿರುವ ಸಹಕಾರವನ್ನು ಮುಂದುವರೆಸುವುದರ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತದೆ. ಯಾವುದನ್ನು ಎಳೆಯುವುದಕ್ಕೂ ಒಂದು ಮಿತಿಯಿದೆ" ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿದ್ದಾರೆ. 
"ಈಗ ಮಾನ್ಯತೆಯಿಲ್ಲ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಬದಲಾಯಿಸಿಕೊಂಡವರ ಬೆರಳಿಗೆ ಮಸಿ ಹಚ್ಚುವ ಕೆಲಸವನ್ನು ಸರ್ಕಾರ ಜಾರಿಗೆ ತಂದರೆ ಬ್ಯಾಂಕ್ ನಲ್ಲಿ ಸರ್ಕಸ್ ನಡೆಯಲಿದೆ" ಎಂದು ಕೂಡ ಅವರು ಹೇಳಿದ್ದಾರೆ. 
"ಸರ್ಕಾರ ಬೇಕಾದರೆ ಬ್ಯಾಂಕ್ ಗಳಲ್ಲಿ ಮತಪೆಟ್ಟಿಗೆಯನ್ನು ಇಡಬಹುದು" ಎಂದು ಮತ್ತೊಬ್ಬ ಬ್ಯಾಂಕ್ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಮಸಿ ಹಚ್ಚುವುದರ ಬದಲು ಬದಲಿ ತಂತ್ರಜ್ಞಾನ ಆಧಾರಿತ ಪರಿಹಾರ ನೀಡುವುದು ಉತ್ತಮ ಎಂದು ಕೂಡ ವೆಂಕಟಾಚಲಂ ಹೇಳಿದ್ದಾರೆ. 
ಜನರಿಗೆ ಹಳೆಯ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಅಗತ್ಯ ಮಟ್ಟದ ಹೊಸ ನೋಟುಗಳನ್ನು ಆರ್ ಬಿ ಐ ಮತ್ತು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಕೂಡ ಹೇಳಿದ್ದಾರೆ. 
ಖಾಸಗಿ ಬ್ಯಾಂಕ್ ಗಳಿಗೆ ಅಗತ್ಯ ಹೊಸ ನೋಟುಗಳು ಪೂರೈಕೆಯಾಗುತ್ತಿದ್ದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳಿಗೆ ಇದು ವ್ಯತ್ಯಯವಾಗುತ್ತಿರುವ ಬಗ್ಗೆಯೂ ಕೆಲವು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. 
SCROLL FOR NEXT