ನವದೆಹಲಿ: ದೆಹಲಿಯ ಮಹೇಂದ್ರ ಪಾರ್ಕ್ ನ ೪೩ ವರ್ಷದ ನಿವಾಸಿ ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಬೆಳಗಿನ ಜಾವ ಆರು ಘಂಟೆಗೆ ನಡೆದಿದ್ದು ಮುಖೇಶ್ ಎಂಬಾತ ತನ್ನ ಪುತ್ರರಾದ ೧೫ ವರ್ಷದ ಆಯುಷ್ ಮತ್ತು ೮ ವರ್ಷದ ಆರ್ಯನ್ ಎಂಬುವವರನ್ನು ಹಗ್ಗದ ಸಹಾಯದಿಂದ ಕುತ್ತಿಗೆ ಹಿಸುಕಿ ಸಾಯಿಸಿದ್ದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.
ಒಂದೂ ವರೆ ವರ್ಷದ ಹಿಂದೆ ತನ್ನ ಪತ್ನಿ ಮೃತಳಾದಾಗಿಲಿಂದಲೂ ಮುಖೇಶ್ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
"ಅವನು ನಿರುದ್ಯೋಗಿಯಾಗಿದ್ದ ಮತ್ತು ಮಹೇಂದ್ರ ಪಾರ್ಕ್ ನ ಸಂಜಯ್ ನಗರದ ಮನೆಯಲ್ಲಿ ತನ್ನಿಬ್ಬರು ಪುತ್ರರೊಂದಿಗೆ ನೆಲೆಸಿದ್ದ" ಎಂದು ಪೊಲೀಸ್ ಉಪ ಕಮಿಷನರ್ ವಿಜಯ್ ಸಿಂಗ್ ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ತನ್ನ ಮನೆಯ ಆವರಣದಲ್ಲಿ ಕಟ್ಟಿದ್ದ ಕಟ್ಟಡ ಅಕ್ರಮವಾಗಿದ್ದು, ಅದನ್ನು ದೆಹಲಿ ಮುನ್ಸಿಪಾಲ್ ಕಾರ್ಪೊರೇಷನ್ ನೆಲಸಮ ಮಾಡಲಿದೆ ಎಂಬ ವಿಷಯಕ್ಕೂ ಮುಖೇಶ್ ಭಯಭೀತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಮುಖೇಶ್ ನನ್ನ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಆಯುಷ್ ೧೦ ನೇ ತರಗತಿಯ ಮತ್ತು ಆರ್ಯನ್ ೮ ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದುಬಂದಿದೆ.