ಬೆಂಗಳೂರು: ನವೆಂಬರ್ ಅಂತ್ಯದವರಗೆ ಸಾಲದ ರೂಪದಲ್ಲಿ ರೇಷನ್ ಕಾರ್ಡ್ ಪಡಿತರ ವಿತರಣೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯು.ಟಿ ಖಾದರ್, ದೇಶಾದ್ಯಂತ 500-1000 ನೋಟುಗಳ ನಿಷೇಧ ಹಿನ್ನೆಲೆ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಕ್ತವಾಗಿ ಹಣ ಸಿಗದೇ ತೊಂದರೆ ಅನುಭವಿಸುತ್ತಿರುವ ಜನರ ಅನುಕೂಲಕ್ಕಾಗಿ ಸರ್ಕಾರ ನವೆಂಬರ್ ಅಂತ್ಯದವರೆಗೂ ಸಾಲದ ರೂಪದಲ್ಲಿ ರೇಷನ್ ನೀಡಲು ತೀರ್ಮಾನಿಸಿದೆ ಎಂದರು.
ಇದೇ ವೇಳೆ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್‌ದಾರರೇ ನಿಮ್ಮ ಖಾತೆಯಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮಾ ಆದರೆ ನಿಮ್ಮ ಕಾರ್ಡ್ ರದ್ದಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ದಾರರು ತಮ್ಮ ಖಾತೆಯಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ಹಣ ಹೊಂದುವಂತಿಲ್ಲ. ಅಧಿಕ ಮೊತ್ತ ಜಮಾ ಆದರೆ ನೀವು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಹಾಗೇನಾದರೂ ಆದರೆ ನಿಮ್ಮ ಕಾರ್ಡ್ ರದ್ದಾಗಲಿದೆ ಎಂದರು. ಇದೇ ವೇಳೆ ಬಿಪಿಎಲ್ ಕಾರ್ಡ್ ದಾರರು ಸ್ವಂತ ಕಾರು, ನಗರ ಪ್ರದೇಶದಲ್ಲಿ ಮನೆ ಹೊಂದುವಂತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ 500-1000 ನೋಟುಗಳ ನಿಷೇಧದ ನಿರ್ಧಾರದ ವಿರುದ್ಧ ಹಾರಿಹಾಯ್ದ ಅವರು, ಕೇಂದ್ರ ಸರ್ಕಾರ ಬಡವರ ಸಾಲ ಮನ್ನ ಮಾಡಿಲ್ಲ. ಶ್ರೀಮಂತ ವರ್ಗದವರ ಸಾಲ ಮನ್ನಾ ಮಾಡಲಾಗುತ್ತಿದೆ. ಇದನ್ನು ನೋಟಿದರೆ ನೋಟು ನಿಷೇಧ ಒಂದು ರಾಜಕೀಯ ಗಿಮಿಕ್ ಎಂದು ಕಾಣಿಸುತ್ತದೆ. ಕೈಗಾರಿಕಾ ಕ್ಷೇತ್ರಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಲು ಮುಂದಾಗಲಿ ಎಂದರು.