ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳುವ ಸಲುವಾಗಿ ಬೇರೆಯವರ ಬ್ಯಾಂಕ್ ಖಾತೆಗಳಲ್ಲಿ ಹಣ ಇಡುತ್ತಿರುವ ಕಾಳಧನಿಕರಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸುವುದಾಗಿ ಕೇಂದ್ರ ಆದಾಯ ತೆರಿಗೆ ಇಲಾಖೆ ಕಟ್ಟೆಚ್ಚರ ನೀಡಿದೆ.
ಅಕ್ರಮ ಹಣವನ್ನು ಸಕ್ರಮ ಮಾಡಲು ಹರಸಾಹಸಪಡುತ್ತಿರುವ ಕಾಳಧನಿಕರ ವಿರುದ್ಧ ಬೇನಾಮಿ ಆಸ್ತಿ ವರ್ಗಾವಣೆ ತಡೆ ಕಾಯ್ದೆ 1988ರಡಿ ಪ್ರಕರಣ ದಾಖಲಿಸಲಾಗುವುದು. ಈ ಕಾಯ್ದೆಯಡಿ ತಪ್ಪಿತಸ್ಥರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ. ಹೀಗಾಗಿ ಇಂಥ ಕೆಲಸಕ್ಕೆ ಯಾರೂ ಕೈ ಹಾಕದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಜನಧನ ಖಾತೆಯಲ್ಲಿ ಮತ್ತು ಬಡವರು ಮತ್ತು ಮಧ್ಯಮ ವರ್ಗದವರ ಖಾತೆಗೆ ಏಕಾಏಕಿ 500 ಮತ್ತು 1000 ರೂಪಾಯಿಗಳ ನೋಟುಗಳು ವರ್ಗಾವಣೆಯಾಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವ ಇಲಾಖೆ ಈಗಾಗಲೇ 30 ಕಡೆಗಳಲ್ಲಿ ದಾಳಿ ನಡೆಸಿದೆ. 80 ಕಡೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಇದುವರೆಗೆ ಒಟ್ಟಾರೆ 200 ಕೋಟಿ ರೂಪಾಯಿ ದಾಖಲೆಗಳಿಲ್ಲದ ಹಣ ಪತ್ತೆಯಾಗಿದೆ. ನವೆಂಬರ್ 8ರ ನಂತರ 50 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೇನಾಮಿ ಹೆಸರಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು ಕಂಡುಬಂದರೆ ಅಂಥವರ ವಿರುದ್ಧ ಬೇನಾಮಿ ಆಸ್ತಿ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಈ ಕಾಯ್ದೆ ನವೆಂಬರ್ 1ರಿಂದ ಜಾರಿಗೆ ಬಂದಿದೆ.
ಅಕ್ರಮ ಹಣ ಬ್ಯಾಂಕ್, ಅಂಚೆ ಕಚೇರಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಇಟ್ಟಿರುವುದು ಕಂಡುಬಂದರೆ ಹಣ ಠೇವಣಿ ಇಟ್ಟ ವ್ಯಕ್ತಿ ಮತ್ತು ಖಾತೆದಾರ ಇಬ್ಬರ ಬಳಿಯಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ.
ಬೇನಾಮಿ ಹೆಸರಿನಲ್ಲಿ 2.5 ಲಕ್ಷಕ್ಕಿಂತ ಅಧಿಕ ಹಣವನ್ನು ವರ್ಗಾವಣೆ ಮಾಡಿದವರಿಗೆ ನೊಟೀಸ್ ಜಾರಿ ಮಾಡಲಾಗುವುದು. ಬ್ಯಾಂಕ್ ಅಥವಾ ಹಣಕಾಸು ಗುಪ್ತಚರ ಇಲಾಖೆಯಿಂದ ಶಂಕಿತ ಹಣ ವರ್ಗಾವಣೆ ಪ್ರಕರಣ ವರದಿಯಾದರೆ ಅವುಗಳನ್ನು ಕೂಡ ತನಿಖೆ ನಡೆಸಲಾಗುವುದು ಎಂದು ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos