ಪ್ರಧಾನ ಸುದ್ದಿ

ನೋಟು ಹಿಂಪಡೆತ ನಿರ್ಧಾರ ಸಮೀಕ್ಷೆ ಪ್ರಾಯೋಜಿತ ಮತ್ತು ನಕಲಿ: ಮಾಯಾವತಿ

Guruprasad Narayana
ನವದೆಹಲಿ: ನರೇಂದ್ರ ಮೋದಿ ಮೊಬೈಲ್ ಆಪ್ ಮೂಲಕ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರ ನಿರ್ಧಾರದ ಬಗ್ಗೆ ಸಮೀಕ್ಷೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವುದು ಪ್ರಾಯೋಜಿತ ಮತ್ತು ನಕಲಿ ಎಂದು ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ, ಲೋಕಸಭೆಯನ್ನು ವಿಸರ್ಜಿಸಿ ಚುನಾವಣಾ ಎದುರಿಸಿ ಎಂದು ಸವಾಲೆಸೆದಿದ್ದಾರೆ.
"ಮೋದಿಯವರು ನಡೆಸಿದ ಸಮೀಕ್ಷೆ ಪ್ರಾಯೋಜಿತ ಮತ್ತು ನಕಲಿ. ಅವರಿಗೆ ಧೈರ್ಯವಿದ್ದರೆ, ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಯನ್ನು ಎದುರಿಸಬೇಕು. ಆಗಲೇ ನಿಜವಾದ ಸಮೀಕ್ಷೆ ಸಾಧ್ಯ" ಎಂದು ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ ಹೇಳಿದ್ದಾರೆ. 
ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರಲ್ಲಿ ೯೩% ಜನ ನಮ್ಮ ನಡೆಯನ್ನು ಸ್ವಾಗತಿಸಿ, ಬೆಂಬಲಿಸಿದ್ದಾರೆ ಎಂದು ಸರ್ಕಾರ ಬುಧವಾರ ಹೇಳಿದ ಹಿನ್ನಲೆಯಲ್ಲಿ ಮಾಯಾವತಿ ಈ ಪ್ರತಿಕ್ರಿಯೆ ನೀಡಿದ್ದಾರೆ. 
ಕಪ್ಪು ಹಣ ತೊಲಗಿಸುವ ಹಾಗು ನಕಲಿ ನೋಟುಗಳಿಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ನವೆಂಬರ್ ೮ ರಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಈ ನಿರ್ಧಾರದಿಂದ ದೇಶದಾದ್ಯಂತ ಗೊಂದಲ ಮತ್ತು ಅವ್ಯವಸ್ಥೆ ದೃಷ್ಟಿಯಾಗಿದ್ದು, ಜನ ಹಣ ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಎದುರು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದ್ದರೆ, ಸಣ್ಣ ವ್ಯವಹಾರಗಳಿಗೆ ಭಾರಿ ಪೆಟ್ಟು ಬಿದ್ದಿದೆ. 
SCROLL FOR NEXT