ನವದೆಹಲಿ: ನೋಟು ನಿಷೇಧದಿಂದ ಉಂಟಾಗಿರುವ ತೊಂದರೆ ವಿರೋಧಿಸಿ ಜನತೆ ಪ್ರತಿಭಟನೆ ಮಾಡುತ್ತಿರುವುದು ತಪ್ಪು ಎಂದಾದಾರೇ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಲ್ಲಿ ಪ್ರಜಾ ಪ್ರಭುತ್ವ ಎಂದರೇನು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಮಾಜಿ ವಿದೇಶಾಂಗ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಆಗ್ರಹಿಸಿದ್ದಾರೆ.
ಮೋದಿ ಅವರಿಗೆ ಪ್ರತಿಭಟನೆ ಮಾಡುವುದು ತಪ್ಪು ಎಂದು ಅನಿಸಿದೆ, ಅಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಇಲ್ಲವೇ, ಹಾಗಿದ್ದರೇ ಡೆಮಾಕ್ರಸಿ ಬಗ್ಗೆ ಮೋದಿ ಅವರಿಗೆ ಇರುವ ಕಲ್ಪನೆಯಾದರೂ ಏನು ಎಂಬುದನ್ನು ತಿಳಿಸಬೇಕು ಎಂದು ಅವರು ಹೇಳಿದ್ದಾರೆ.
ಮೋದಿ ಕೆಟ್ಟ ಕೆಲಸ ಮಾಡಿದ್ದಾರೆ ಅದನ್ನು ಟೀಕಿಸಬಹುದು, ಒಳ್ಳೆಯ ಕೆಲಸ ಮಾಡಿದ್ದರೇ ಅಭಿನಂದಿಸುವ ಅಧಿಕಾರವಿದೆ ಎಂದು ಅವರು ತಿಳಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಆತಂಕ ಪಡುವ ಅಗತ್ಯವಿಲ್ಲ ಎಂದು ನನಗನ್ನಿಸುತ್ತದೆ. ಏಕೆಂದರೇ ಭ್ರಷ್ಟಾಚಾರ ನಿಯಂತ್ರಣಕ್ಕೆ ಶೇ. ನೂರರಷ್ಟು ಬೆಂಬಲ ಸಿಗುತ್ತದೆ. ಆದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳು ಪ್ರಾಮಾಣಿಕವಾಗಿರಬೇಕು ಎಂದು ಹೇಳಿದ್ದಾರೆ.
ಭ್ರಷ್ಟಾಚಾರವನ್ನು ಕೆಟ್ಟ ರೀತಿಯಲ್ಲಿ ನಿರ್ವಹಿಸಿದರೇ ಅದಕ್ಕೆ ದೇಶದ ಜನತೆಯ ವಿರೋಧವಿದೆ. ಹಾಗೆಯೇ ನೀವು ಭ್ರಷ್ಟಾಚಾರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೇ, ದೇಶ ಹಾಗೂ ಎಲ್ಲಾ ಪಕ್ಷಗಳು ನಿಮಗೆ ಬೆಂಬಲ ನೀಡುತ್ತವೆ, ನಿಮ್ಮ ನಿಲುವಿಗೆ ಬದ್ಧರಾಗುತ್ತಾರೆ ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.