ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಯೂ ಟರ್ನ್ ಹೊಡೆದಿರುವ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ರಾಜಕೀಯ ಪಕ್ಷಗಳು ಸೋಮವಾರ ವಾಗ್ದಾಳಿ ನಡೆಸಿದ್ದು, ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ನಂಬಿಕೆದ್ರೋಹ ಎಸಗಿದೆ ಎಂದು ಆರೋಪಿಸಿವೆ.
ಸುಪ್ರೀಂಕೋರ್ಟಿಗೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಇದಕ್ಕೆ ಆಡಳಿತರೂಢ ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
2018ರಲ್ಲಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯ ಲಾಭ ಪಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಗೆ ವಿರೋಧ ವ್ಯಕ್ತಪಡಿಸಿದೆ ಎಂದು ಎಐಎಡಿಎಂಕೆ ವಕ್ತಾರೆ ಸಿ.ಆರ್ ಸಾರಸ್ವತಿ ಅವರು ಆರೋಪಿಸಿದ್ದಾರೆ.
ಈ ಮುಂಚೆ ನಾಲ್ಕು ದಿನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ ಏಕೆ ಸಾಧ್ಯವಿಲ್ಲ ಎಂದು ಹೇಳುತ್ತಿದೆಯೋ ಗೊತ್ತಿಲ್ಲ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕರ್ನಾಟಕ ನಮಗೆ ದ್ರೋಹ ಮಾಡುತ್ತಿದೆ. ಈಗ ಕೇಂದ್ರ ಸರ್ಕಾರವೂ ದ್ರೋಹ ಮಾಡಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಕಡೆಗಣಿಸಿದೆ ಮತ್ತು ತಮಿಳುನಾಡಿಗೆ ದ್ರೋಹ ಮಾಡಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು, ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಸ್ಥಿಕೆಯಲ್ಲಿ ಕಾವೇರಿ ವಿಚಾರ ಇತ್ಯರ್ಥಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics