ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಸೀಮಿತ ದಾಳಿ ಬಳಿಕ ವಿಶ್ವ ಸಮುದಾಯದ ಎದುರು ತೀವ್ರ ಮುಖಭಂಗಕ್ಕೀಡಾಗಿರುವ ಪಾಕಿಸ್ತಾನ ಇದೀಗ ತನ್ನ ಮಾನ ಉಳಿಸಿಕೊಳ್ಳಲು ಪರದಾಡುತ್ತಿದ್ದು, ಭಾರತದಿಂದ ಸೀಮಿತ ದಾಳಿಯೇ ನಡೆದಿಲ್ಲ ಎಂದು ಸಾಬೀತು ಪಡಿಸಲು ಗಡಿಗೆ ಮಾಧ್ಯಮಗಳ ಪರೇಡ್ ನಡೆಸಿದೆ.
ಭಾರತೀಯ ಸೇನಾಪಡೆಗಳು ಕಳೆದ ಬುಧವಾರ ರಾತ್ರಿ ದಾಳಿ ನಡೆಸಿದ್ದ ಪಾಕಿಸ್ತಾನದ ವಶದಲ್ಲಿರುವ 2 ಪ್ರಮುಖ ಗಡಿ ಪ್ರದೇಶಗಳಾದ ಬಾಕ್ಸರ್, ಹಾಟ್ ಸ್ಪ್ರಿಂಗ್ಸ್ ಗಡಿ ಪ್ರದೇಶಕ್ಕೆ ಪಾಕಿಸ್ತಾನೀ ಹಾಗೂ ವಿದೇಶಿ ಮಾಧ್ಯಮಗಳನ್ನು ಕರೆದೊಯ್ಯಲಾಗಿದೆ. ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಸೀಮ್ ಸಲೀಂ ಬಜ್ವಾ ಅವರ ನೇತೃತ್ವದಲ್ಲಿ ಪತ್ರಕರ್ತರನ್ನು ಕರೆದೊಯ್ಯಲಾಗಿದ್ದು, ಇದಕ್ಕಾಗಿ ವಿಶೇಷ ವಿಮಾನ ಬಳಕೆ ಮಾಡಿದ್ದ ಸೇನೆ ಇಸ್ಲಾಮಾಬಾದಿನಿಂದ ನೇರ ಗಡಿ ಪ್ರದೇಶಕ್ಕೆ ಅವರನ್ನು ಕರೆದೊಯ್ದು ದಾಳಿ ನಡೆದಿಲ್ಲ ಎಂದು ವಿವರಣೆ ನೀಡಿದೆ. ಅಲ್ಲದೆ ಅದೊಂದು ಕೇವಲ ಗಡಿಯಲ್ಲಿನ ಗುಂಡಿನ ಚಕಮಕಿಯಷ್ಟೇ ಎಂದು ಹೇಳಲು ಹರಸಾಹಸಪಟ್ಟಿದೆ.
ಮೂಲಗಳ ಪ್ರಕಾರ ಪಾಕಿಸ್ತಾನ ಸೇನೆಯ ಆಹ್ವಾನದ ಮೇರೆಗೆ ಸಿಎನ್ ಎನ್, ಬಿಬಿಸಿ, ವಿಒಎ, ರಾಯಿಟರ್ಸ್, ಎಪಿ, ಎಎಫ್ ಪಿ, ನ್ಯೂಸ್ ವೀಕ್, ಬಿಬಿಸಿ ಉರ್ದು ಸುದ್ದಿ ವಾಹಿನಗಳ ಮಾಧ್ಯಮ ಪ್ರತಿನಿಧಿಗಳು ಗಡಿ ಪ್ರದೇಶಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ವರದಿ ಮಾಡಿರುವ ಬಿಬಿಸಿ ಪಾಕಿಸ್ತಾನಿ ಸೇನಾಧಿಕಾರಿಗಳು ತೋರಿಸಿದ ಪ್ರದೇಶದಲ್ಲಿ ದಾಳಿ ಮಾಡಿದ ಯಾವುದೇ ಕುರುಹುಗಳು ಲಭ್ಯವಾಗುತ್ತಿಲ್ಲ. ಆದರೆ ಭಾರತ ದಾಳಿ ಮಾಡಿದೆ ಎಂದು ಹೇಳಲಾಗುತ್ತಿರುವ ಪ್ರದೇಶವನ್ನೇ ಪಾಕಿಸ್ತಾನ ಸೇನಾಧಿಕಾರಿಗಳು ತೋರಿದ್ದಾರೆಯೇ ಎಂಬ ಅನುಮಾನ ಕೂಡ ಇದೆ. ಅವರ ತೋರಿದ ಪ್ರದೇಶದಲ್ಲಿ ಯಾವುದೇ ದಾಳಿಯಾದ ಕುರುಹುಗಳಿಲ್ಲ ಎಂದು ವರದಿ ಮಾಡಿದೆ.
ಇನ್ನು ಪಾಕಿಸ್ತಾನದ ಈ ನಡೆ ವಿಶ್ವ ಸಮುದಾಯದ ನಗೆಪಾಟಲಿಗೆ ಕಾರಣವಾಗಿದ್ದು, ವಿಶ್ವ ಸಮುದಾಯದ ಎದುರು ಪಾಕಿಸ್ತಾನ ತನ್ನ ಮಾನ ಉಳಿಸಿಕೊಳ್ಳಲು ಪರದಾಡುತ್ತಿರುವ ಪರಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.