ಉಗ್ರ ಇಮ್ರಾನ್ ಬಿಲಾಲ್ (ಸಂಗ್ರಹ ಚಿತ್ರ)
ಬೆಂಗಳೂರು: ಬೆಂಗಳೂರಿನ ಹಲವು ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಲಷ್ಕರ್ ಇ ತೋಯಿಬಾ ಉಗ್ರ ಇಮ್ರಾನ್ ಬಿಲಾಲ್ ಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ನಿನ್ನೆಯಷ್ಟೇ ಉಗ್ರ ಇಮ್ರಾನ್ ಬಿಲಾಲ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ 56ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೊಟ್ರಯ್ಯ ಎಂ. ಹಿರೇಮಠ್ ಅವರು, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.
ಇಂದು ಉಗ್ರನಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶರು, ಅಪರಾಧಿಗೆ 8 ಕಲಂಗಳಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಕರ್ನಾಟಕದ ಖ್ಯಾತ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಇನ್ ಫೋಸಿಸ್ ಹಾಗೂ ವಿಪ್ರೋ ಕಚೇರಿಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಆಗಮಿಸಿದ್ದ ಇಮ್ರಾನ್ ಬಿಲಾಲ್ ನನ್ನು 2007ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.
ಹೊಸಪೇಟೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಬಂಧಿಸಿದ್ದ ಪೊಲೀಸರು ಆತನಿಂದ ಎಕೆ 56 ಗನ್, 300 ಸುತ್ತು ಜೀವಂತ ಗುಂಡುಗಳು, ಸ್ಯಾಟಲೈಟ್ ಫೋನ್ ಹಾಗೂ 5 ಗ್ರೆನೇಡ್ ಗಳನ್ನು ವಶಪಡಿಸಿಕೊಂಡಿದ್ದರು.
2007ರ ಜನವರಿ 5ರ ಮುಂಜಾನೆ ತಮಗೆ ಬಂದಿದ್ದ ಖಚಿತ ಮಾಹಿತಿಯಾಧಾರದ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಗೊರಗುಂಟೆ ಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಬಂಧಿಸಿದ್ದರು. 32 ವರ್ಷದ ಇಮ್ರಾನ್ ಬಿಲಾಲ್ ಮೂಲತಃ ಜಮ್ಮು ಮತ್ತು ಕಾಶ್ಮೀರದವನಾಗಿದ್ದು, ಪಾಕಿಸ್ತಾನದಲ್ಲಿ ಈತ ಉಗ್ರ ತರಬೇತಿ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಬಂಧನದ ಸಂದರ್ಭದಲ್ಲಿ ಆತನಿಂದ ವಿವಿಧ ಮೊಬೈಲ್ ಗಳು, ಹಲವು ಸಿಮ್ ಕಾರ್ಡ್ ಗಳು, ಬೆಂಗಳೂರು ನಗರದ ಮ್ಯಾಪ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos