ಪಾಟ್ನಾ: ಬಿಹಾರದ ಪ್ರಭಾವಿ ರಾಜಕಾರಣಿಯಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ಸಿಎಂ ನಿತೀಶ್ ಕುಮಾರ್ ಗೆ ಸಂದಶವೊಂದನ್ನು ರವಾನಿಸಿದ್ದು, ತನ್ನನ್ನು ಅತ್ಯಾಚಾರ ಗೈದ ಪ್ರಭಾವಿ ರಾಜಕಾರಣಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ನನಗೆ ಪ್ರಾಣಭೀತಿ ಇದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಕಳೆದ ಎರಡು ತಿಂಗಳ ಹಿಂದೆ ನಳಂದಾ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಆರ್ ಜೆಡಿ ಮುಖಂಡ ರಾಜ್ ಬಲ್ಲಭ್ ಯಾದವ್ ಅವರು ಅತ್ಯಾಚಾರ ಗೈದು ಜೈಲು ಸೇರಿದ್ದರು. ಸತತ ವಿಚಾರಣೆಗಳ ಬಳಿಕ ಕೆಳ ನ್ಯಾಯಾಲಯಗಳಲ್ಲಿ ರಾಜ್ ಬಲ್ಲಭ್ ಯಾದವ್ ಗೆ ಜಾಮೀನು ನಿರಾಕರಿಸಲಾಗಿತ್ತು. ಆದರೆ ಕೆಳ ನ್ಯಾಯಾಲಯಗಳ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜ್ ಬಲ್ಲಭ್ ಯಾದವ್ ಷರತ್ತುಬದ್ಧ ಜಾಮೀನು ಪಡೆದಿದ್ದರು.
ಕಳೆದ ಶನಿವಾರ ರಾಜ್ ಬಲ್ಲಭ್ ಜೈಲಿನಿಂದ ಬಿಡುಗಡೆಯಾಗಿದ್ದು, ಇದೀಗ ಸಂತ್ರಸ್ತ ಬಾಲಕಿ ಪ್ರಾಣ ಭೀತಿ ಎದುರಿಸುತ್ತಿದ್ದಾಳೆ. ಹೀಗಾಗಿ ಬಿಹಾರದ ಪತ್ರಕರ್ತರೋರ್ವರಿಗೆ ವಾಟ್ಸಪ್ ನಲ್ಲಿ ಸಂದೇಶ ರವಾನಿಸಿರುವ ಬಾಲಕಿ ತನ್ನನ್ನು ಅತ್ಯಾಚಾರ ಗೈದ ರಾಜಕಾರಣಿ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ತಾನು ಇದೀಗ ಪ್ರಾಣ ಭೀತಿ ಎದುರಿಸುತ್ತಿದ್ದೇನೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರವಾನಿಸಿ ಎಂದು ಆಕೆ ಮನವಿ ಮಾಡಿಕೊಂಡಿದ್ದಾಳೆ.
ಆತ ತಾನು ಪಾರಾಗಲು ನನ್ನನ್ನು ಕೊಲ್ಲಲು ಕೂಡ ಹಿಂಜರಿಯುವುದಿಲ್ಲ. ಈ ಹಿಂದೆ ನಾನು ಪ್ರಕರಣ ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದ. ತನ್ನ ಆಪ್ತರ ಮೂಲಕ ಹಣ ನೀಡಿ ಕೊಲೆ ಬೆದರಿಕೆ ಕೂಡ ಹಾಕಿದ್ದ. ನನ್ನ ಕುಟುಂಬಕ್ಕೂ ಆತ ಬೆದರಿಕೆ ಹಾಕಿದ್ದು, ಸ್ಥಳೀಯ ಪೊಲೀಸರು ಕೂಡ ಆತನನ್ನು ಕಂಡರೆ ಹೆದರುತ್ತಾರೆ ಎಂದು ಬಾಲಕಿ ನೋವು ತೋಡಿಕೊಂಡಿದ್ದಾಳೆ.
ಬಾಲಕಿಯ ಈ ಸಂದೇಶ ಇದೀಗ ಬಿಹಾರದಲ್ಲಿ ವೈರಲ್ ಆಗಿದ್ದು, ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.