ರಾಜ್ಯಪಾಲರನ್ನು ಭೇಟಿ ಮಾಡಿದ ಸಚಿವರು
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಕೆಗೆ ಸುದೀರ್ಘ ಸಮಯ ಬೇಕು ಎಂದು ವೈದ್ಯರು ಹೇಳಿದ್ದರಿಂದ ಸರ್ಕಾರ ಮುನ್ನಡೆಸುವ ಕುರಿತು ಎಐಎಡಿಎಂ ತೀವ್ರ ಒತ್ತಡಕ್ಕೆ ಸಿಲುಕಿದೆ.
ಜಯಲಲಿತಾ ಅವರು ಗುಣಮುಖರಾಗುವವರೆಗೆ ತಾತ್ಕಾಲಿಕ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ನೇಮಕ ಮಾಡಬೇಕು ಎಂಬ ಮಾತುಗಳಿಗೆ ತೆರೆ ಎಳೆದಿರುವ ತಮಿಳುನಾಡು ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉಪ ಮುಖ್ಯಮಂತ್ರಿ ನೇಮಕ ಮಾಡುವ ಅಥವಾ ಸಚಿವ ಖಾತೆ ಬದಲಾವಣೆ ಮಾಡುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಉಸ್ತುವಾರಿ ರಾಜ್ಯಪಾಲ ಸಿಎಚ್. ವಿದ್ಯಾಸಾಗರ ರಾವ್ ಅವರಿಗೆ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಹಣಕಾಸು ಸಚಿವ ಒ.ಪನ್ನೀರಸೆಲ್ವಮ್, ಇತರ ಸಚಿವರಾದ ಎಡಪ್ಪಡಿ ಕೆ. ಪಳನಿಸ್ವಾಮಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರಾಮ್ ಮೋಹನ್ ರಾವ್ ಅವರು ಸರ್ಕಾರದ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಹಾಗೂ ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು ಎಂದು ರಾಜಭವನ ಪ್ರಕಟಣೆ ತಿಳಿಸಿದೆ.
ಕಾವೇರಿ ಉನ್ನತ ತಾಂತ್ರಿಕ ತಂಡ ತಮಿಳುನಾಡಿಗೆ ಬರುತ್ತಿರುವ ಬಗ್ಗೆ ಮತ್ತು ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸಚಿವ ಎಡಪ್ಪಡಿ ಕೆ. ಪಳನಿಸ್ವಾಮಿ ಅವರು ರಾಜ್ಯಪಾಲರಿಗೆ ವಿವರ ನೀಡಿದರು.
ಸೆ.22ರಿಂದ ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆ ಮೂಲಗಳ ಪ್ರಕಾರ ತಮಿಳುನಾಡು ಸಿಎಂ ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದು, ವೈದ್ಯರು ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics