ಪುದುಚೇರಿ: ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧಿಸಿದ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದು, ತಮಿಳುನಾಡು ಮತ್ತು ಪುದುಚೇರಿಗೆ ಕಾವೇರಿ ನೀರು ಹರಿಸಬಾರದು ಎಂಬ ಕೇಂದ್ರದ ಉದ್ದೇಶ ಬಹಿರಂಗವಾಗಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್ ಸೂಚನೆಯನ್ನು ಧಿಕ್ಕರಿಸಿ ಎನ್ ಡಿಎ ಸರ್ಕಾರ ಮಂಡಳಿ ರಚನೆಗೆ ವಿರೋಧಿಸಿದೆ. ಇದರಿಂದ ತಮಿಳುನಾಡು ಮತ್ತು ಪುದುಚೇರಿಗೆ ಹರಿಯುವ ನೀರನ್ನು ತಡೆಯುವ ಕೇಂದ್ರ ಉದ್ದೇಶ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ತಮಿಳುನಾಡು ಮತ್ತು ಪುದುಚೇರಿ ಪ್ರತಿ ವರ್ಷ ಸುಪ್ರೀಂ ಕೋರ್ಟ್ ಅಲೆಯುವುದು ತಪ್ಪುತ್ತದೆ ಮತ್ತು ನಾಲ್ಕು ರಾಜ್ಯಗಳಿಗೂ ಸರಿಯಾದ ರೀತಿಯಲ್ಲಿ ನೀರಿನ ಹಂಚಿಕೆಯಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಸೂಚನೆಯಂತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.