ಪ್ರಧಾನ ಸುದ್ದಿ

ಇಂದಿನಿಂದ 90 ವರ್ಷದ ಸಾಂಪ್ರದಾಯಿಕ ಚಡ್ಡಿ ತೊರೆದು ಪ್ಯಾಂಟ್ ಮೊರೆಹೋದ ಆರ್ ಎಸ್ ಎಸ್

Guruprasad Narayana
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನವಾದ ಇಂದು, ಅದರ ಕಾರ್ಯಕರ್ತರು 90 ವರ್ಷದ ಸಂಪ್ರದಾಯದ ಖಾಕಿ ಚಡ್ಡಿಗೆ ತಿಲಾಂಜಲಿ ಇತ್ತು, ಕಡು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಆದರೆ ಬಿದಿರು ಕೋಲು ಮಾತ್ರ ಸಂಪ್ರದಾಯದಂತೆ ಸಮವಸ್ತ್ರದ ಭಾಗವಾಗಿ ಉಳಿಯಲಿದೆ. 
ಸಮವಸ್ತ್ರದ ಇತರ ಭಾಗಗಳಾದ ಬಿಳಿ ಅಂಗಿ ಮತ್ತು ಶೂಗಳು ಹಾಗೆಯೇ ಉಳಿದಿದ್ದು, ನಿಕ್ಕರ್ ಮಾತ್ರ ಪ್ಯಾಂಟ್ ಗೆ ಬದಲಾಗಿದೆ. ಕಾಲುಚೀಲದ ಬಣ್ಣ ಕೂಡ ಖಾಕಿ ಬಣ್ಣದಿಂದ ಕಡು ಕಂದು ಬಣ್ಣಕ್ಕೆ ತಿರುಗಿದೆ. ತಲೆಯ ಮೇಲೆ ಕಪ್ಪು ಬಣ್ಣದ ಟೋಪಿ ಇರಲಿದೆ. 
ತೀವ್ರ ಚಳಿ ಇರುವ ಪ್ರದೇಶಗಳಾದ ಉತ್ತರ ಮತ್ತು ಪೂರ್ವ ಭಾಗದ ರಾಜ್ಯಗಳಲ್ಲಿ ಕಾರ್ಯಕರ್ತರು ಕಂದು ಬಣ್ಣದ ಸ್ವೆಟರ್ ಕೂಡ ತೊಡಲಿದ್ದಾರೆ. 
"ಸಂಘದ ಜೊತೆಗೆ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಲು ಸಮಾಜದಲ್ಲಿ ಒಪ್ಪಿಗೆ ಹೆಚ್ಚಿದ್ದರೂ, ಕೆಲಸ ಮಾಡುವಾಗ ಅನುಕೂಲ ಮಾತು ಸುಲಲಿತತೆಯ ದೃಷ್ಟಿಯಿಂದ ಸಮವಸ್ತ್ರ ಬದಲಿಸಲಾಗಿದೆ. ಬದಲಾದ ಸಮಯದಲ್ಲಿ ತಾನು ಬದಲಾಗುವ ಸಂಘದ ಮನಸ್ಥಿತಿಯನ್ನು ಈ ಬದಲಾವಣೆ ಹಿಡಿದಿಡುತ್ತದೆ" ಎಂದು ಆರ್ ಎಸ್ ಎಸ್ ಪ್ರಚಾರ ವಿಭಾಗದ ಮುಖ್ಯಸ್ಥ ಮನಮೋಹನ್ ವೈದ್ಯ ಹೇಳಿದ್ದಾರೆ. 
ದೇಶದ ವಿವಿಧ ಆರ್ ಎಸ್ ಎಸ್ ಕಚೇರಿಗಳಲ್ಲಿ ಈಗಾಗಲೇ 8 ಲಕ್ಷ ಪ್ಯಾಂಟ್ ಗಳನ್ನು ವಿತರಿಸಲಾಗಿದೆ. 2009 ರಲ್ಲಿಯೇ ಸಮವಸ್ತ್ರದ ಬದಲಾವಣೆ ಬಗ್ಗೆ ಪ್ರಸ್ತಾಪಿಸಲಾಗಿತ್ತಾದರೂ, 2015 ರಲ್ಲಿ ಮಾತ್ರ ನಿರ್ಣಯ ಕೈಗೊಳ್ಳಲಾಗಿತ್ತು. 
SCROLL FOR NEXT