ಲಖನೌ: ಭಯೋತ್ಪಾದನೆ ಮಾನವತೆಯ ಅತಿ ದೊಡ್ಡ ಶತ್ರುವಾಗಿದ್ದು, ಉಗ್ರವಾದಕ್ಕೆ ಬೆಂಬಲ ನೀಡುವವರಿಗೂ ತಕ್ಕ ಪಾಠ ಕಲಿಸಬೇಕಾಗಿದೆ ಮತ್ತು ಆ ಪ್ರಕ್ರಿಯೆಯನ್ನು ನಾವು ಈಗಾಗಲೇ ಆರಂಭಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಲಖ್‌ನೌನಲ್ಲಿನ ಐಷ್‌ಬಾಗ್ ಮೈದಾನದಲ್ಲಿ ಪುರಾತನ ಕಾಲದಿಂದಲೂ ನಡೆದು ಬರುತ್ತಿರುವ ರಾಮಲೀಲಾ ಕಾರ್ಯಕ್ರಮದಲ್ಲಿ ಬೃಹತ್‌ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಯುದ್ಧ ಮತ್ತು ಶಾಂತಿ ಎರಡನ್ನೂ ಸಮಾನವಾಗಿ ಪರಿಗಣಿಸಿದ ದೇಶ ನಮ್ಮದು. ಯುದ್ಧ ಭೂಮಿಯಲ್ಲೂ ಶ್ರೀಕೃಷ್ಣ ಗೀತೆ ಹೇಳಿದೆ ದೇಶ ಇದು. ಹೀಗಾಗಿ ನಾವು ಯುದ್ಧಕ್ಕಿಂತಲೂ ಬುದ್ದನತ್ತ ಹೋಗಲು ಬಯಸುತ್ತೇವೆ. ಆದರೆ ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ಯುದ್ಧ ಅನಿವಾರ್ಯವಾಗುತ್ತದೆ ಎಂದು ಪಾಕ್ ಗೆ ಎಚ್ಚರಿಸಿದ್ದಾರೆ.
ರಾವಣನ ಉಗ್ರವಾದದ ವಿರುದ್ಧ ಜಟಾಯು ಮೊದಲ ಯುದ್ಧ ಮಾಡಿದ್ದ. ನಾವೆಲ್ಲರೂ ರಾಮನಾಗಲು ಸಾಧ್ಯವಾಗದೇ ಹೋದರೂ, ಜಟಾಯುವಾಗಲು ಪ್ರಯತ್ನಿಸೋಣ, ಭಯೋತ್ಪಾದನೆಯನ್ನು ತೊಲಗಿಸಲು ನಾವೆಲ್ಲರೂ ಒಂದಾಗೋಣ ಎಂದು ಪ್ರಧಾನಿ ಕರೆ ನೀಡಿದರು.
ನಾವು ನಮ್ಮೊಳಿಗ ದುಷ್ಟತನಗಳನ್ನು ಕೊನೆಗಾಣಿಸುವುದೇ ದಸರಾ. ನಮ್ಮೊಳಗಿನ 10 ದುಷ್ಟತನಗಳನ್ನು ನಾವು ಕೊಲ್ಲಬೇಕಾಗಿದೆ. ಪ್ರತಿವರ್ಷ ನಾವು ರಾವಣನನ್ನು ಸುಡುತ್ತೇವೆ. ಇದು ನಮಗೆ ಹೇಳುವ ಪಾಠವೇನು? ಪ್ರತಿವರ್ಷವೂ ನಾವು ನಮ್ಮೊಳಗಿನ ಮತ್ತು ಸಮಾಜದಲ್ಲಿನ ರಾವಣನನ್ನು ಕೊಲ್ಲುತ್ತೇವೆ ಎಂಬುದೇ ಈ ಪಾಠ. ನಾವು ಭಯೋತ್ಪಾದನೆಯಿಂದ ಮುಕ್ತರಾಗಿದ್ದೇವೆ ಎಂದು ಭಾವಿಸಿದರೆ ಅದು ತಪ್ಪು. ಭಯೋತ್ಪಾದನೆಯ ವೈರಾಣು ನಮ್ಮ ಸಮಾಜವನ್ನು ಬಾಧಿಸುತ್ತಿದೆ. ಇಡೀ ಜಗತ್ತು ಭಯೋತ್ಪಾದನೆಯಿಂದ ನಾಶವಾಗುತ್ತಿದೆ ಎಂದರು.
ಸೀಮಿತ ದಾಳಿಯ ನಂತರ ಇದೇ ಮೊದಲ ಬಾರಿಗೆ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪುರಾತನ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಯಾಗಿರವುದಕ್ಕೆ ತನಗೆ ಅತೀವ ಸಂತಸವೆನಿಸಿದೆ. ರಾಮ, ಕೃಷ್ಣ ಜನಿಸಿದ ಭೂಮಿಯಲ್ಲಿ ವಿಜಯದಶಮಿಯ ಪವಿತ್ರ ದಿನದಂದು ಇಲ್ಲಿ ಮಾತನಾಡುವ ಅವಕಾಶ ಸಿಕ್ಕಿರುವುದು ತನ್ನ ಪಾಲಿನ ಭಾಗ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics