ಪ್ರಧಾನ ಸುದ್ದಿ

10 ಸಾವಿರ ಕೋಟಿ ಕಪ್ಪು ಹಣ ಘೋಷಣೆ: ಪ್ರಧಾನಿ ಬಳಿಗೆ ಚಂದ್ರಬಾಬು ನಾಯ್ಡು, ಜಗನ್ ಜಗಳ

Lingaraj Badiger
ಹೈದರಾಬಾದ್: ಕಪ್ಪು ಹಣದ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಪ್ರತಿಪಕ್ಷ ನಾಯಕ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ನಡುವಿನ ರಾಜಕೀಯ ಸಮರ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಅಂಗಳ ತಲುಪಿದೆ.
ಕೇಂದ್ರ ಸರ್ಕಾರದ ಸ್ವಯಂಘೋಷಿತ ಕಪ್ಪು ಹಣ ಘೋಷಣೆ ಯೋಜನೆ(ಐಡಿಎಸ್) ಅಡಿ ಹೈದರಾಬಾದಿನ ವ್ಯಕ್ತಿಯೊಬ್ಬರೇ 10 ಸಾವಿರ ಕೋಟಿ ರುಪಾಯಿ ಘೋಷಿಸಿಕೊಂಡಿದ್ದು, ಬಹುಶಃ ಇದು ನನ್ನ ರಾಜಕೀಯ ವೈರಿಗಳ ಖಾತೆ ಇರಬಹುದು ಎಂದು ಚಂದ್ರಬಾಬು ನಾಯ್ಡು ಅವರು ಪರೋಕ್ಷವಾಗಿ ವೈಎಸ್ ಆರ್ ಕಾಂಗ್ರೆಸ್ ನಾಯಕನ ವಿರುದ್ಧ ನಿನ್ನೆ ವಾಗ್ದಾಳಿ ನಡೆಸಿದ್ದರು. 
ನಾಯ್ಡು ಅವರ ಪರೋಕ್ಷ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಜಗನ್, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, 2016 ಐಡಿಎಸ್ ಪಟ್ಟಿಯನ್ನು ಪ್ರಕಟಿಸುವಂತೆ ಮತ್ತು ಆಂಧ್ರ ಮುಖ್ಯಮಂತ್ರಿ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇನ್ನು ಚಂದ್ರಬಾಬು ನಾಯ್ಡು ಸಹ ಪ್ರಧಾನಿಗೆ ಪತ್ರ ಬರೆದಿದ್ದು, ಕಪ್ಪು ಹಣ ತಡೆ, ನಕಲಿ ನೋಟು ತಡೆಗಟ್ಟಲು 1,000 ರು ಹಾಗೂ 500 ರು ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಹಾಗೂ ಚಲಾವಣೆಯನ್ನು ನಿಲ್ಲಿಸಬೇಕು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ತಡೆಯಬಹುದು ಎಂದು ಸಲಹೆ ನೀಡಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಚಂದ್ರಬಾಬು ನಾಯ್ಡು ಅವರು, ಐಡಿಎಸ್ ಯೋಜನೆಯಡಿ ಒಟ್ಟಾರೆ ಹೈದರಾಬಾದಿನಿಂದ 13,000 ಕೋಟಿ ರು ಕಪ್ಪು ಹಣ ಘೋಷಣೆಯಾಗಿದೆ. ಈ ಪೈಕಿ ಒಬ್ಬ ವ್ಯಕ್ತಿಯೇ 10,000 ಕೋಟಿ ರು ಘೋಷಿಸಿದ್ದಾರೆ. ದೇಶದೆಲ್ಲೆಡೆಯಿಂದ ಒಟ್ಟಾರೆ 65,000 ಕೋಟಿ ರು ಘೋಷಣೆಯಾಗಿದೆ. ಈ ಪೈಕಿ 10 ಸಾವಿರ ಕೋಟಿ ರು ಹೈದರಾಬಾದ್ ಮೂಲದ ಉದ್ಯಮಿ ಹೆಸರಿನಿಂದ ಘೋಷಣೆಯಾಗಿದೆ. ಆದರೆ, ಕಾನೂನಿನ ಪ್ರಕಾರ ಆ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎಂದಿದ್ದರು.
SCROLL FOR NEXT