ನವದೆಹಲಿ: ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕು ಎನ್ನುವ ನಿಲುವಿಗೆ ಅಡ್ಡಿಯಾಗಿರುವ ಚೀನಾಗೆ ಟಾಂಗ್ ನೀಡಿರುವ ಭಾರತ ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣ ಸಂಬಂಧ ಚಾರ್ಜ್ ಶೀಟ್ ದಾಖಲು ಮಾಡಿದೆ.
ಪಠಾಣ್ ಕೋಟ್ ಸೇನಾನೆಲೆ ಮೇಲಿನ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಉಗ್ರ ಮಸೂದ್ ಅಜರ್ ಸೇರಿದಂತೆ ಆತನ ಸಹೋದರ ಅಬ್ದುಲ್ ರಾಫ್, ಇತರೆ ಇಬ್ಬರು ಉಗ್ರರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಿದೆ. ಇನ್ನು ಎನ್ ಐಎ ದಾಖಲಿಸಿರುವ ಚಾರ್ಜ್ ಶೀಟ್ ನಲ್ಲಿರುವ ಇತರೆ ಇಬ್ಬರು ಉಗ್ರಗಾಮಿಗಳು ಕೂಡ ಪಾಕಿಸ್ತಾನ ಮೂಲದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಎನ್ ಐಎ ಅಧಿಕಾರಿಗಳು ಸಂಗ್ರಹಿಸಿರುವ ಪ್ರಮುಖ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಚಾರ್ಜ್ ಶೀಟ್ ದಾಖಲಿಸಲಾಗಿದ್ದು, ಇದರಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ದೂರವಾಣಿ ಕರೆಗಳ ಮಾಹಿತಿ, ಸ್ಥಳದಲ್ಲಿ ದೊರೆತ ವಸ್ತುಗಳ ಮೂಲ ಹಾಗೂ ಸಾವಿಗೀಡಾದ ಉಗ್ರಗಾಮಿಗಳ ಮೂಲಗಳನ್ನು ಆಧರಿಸಿ ವರದಿ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.
ಎನ್ ಐಎ ಅಧಿಕಾರಿಗಳ ಈ ಚಾರ್ಜ್ ಶೀಟ್ ವಿಶ್ವಸಂಸ್ಥೆಯಲ್ಲಿ ಅಜರ್ ಮಸೂದ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಮನವಿಗೆ ಬಲ ತಂದಂತಾಗಿದೆ. ಈ ಮೂಲಕ ಭಾರತ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಪರಿಣಾಮಕಾರಿ ಒತ್ತಡ ಹೇರಲು ಅನುಕೂಲವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.