ವಾರಣಾಸಿ ಕಾಲ್ತುಳಿತ: ಸಾವಿನ ಸಂಖ್ಯೆ 25ಕ್ಕೆ ಏರಿಕೆ, ಎಸ್ಪಿ ಸೇರಿ 5 ಅಧಿಕಾರಿಗಳ ಅಮಾನತು
ಉತ್ತರ ಪ್ರದೇಶ ವಾರಣಾಸಿಯ ರಾಜಘಾಟ್ ಸೇತುವೆ ಮೇಲೆ ನಿನ್ನೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ...
ವಾರಣಾಸಿ: ಉತ್ತರ ಪ್ರದೇಶ ವಾರಣಾಸಿಯ ರಾಜಘಾಟ್ ಸೇತುವೆ ಮೇಲೆ ನಿನ್ನೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಯಾದವ್, ಸಂಚಾರಿ ಎಸ್ಪಿ ಕಮಲ್ ಕಿಶೋರ್, ಸರ್ಕಲ್ ಇನ್ಸ್ ಪೆಕ್ಟರ್ ರಾಹುಲ್ ಮಿಶ್ರ ಮತ್ತು ರಾಮನಗರ, ಮುಘಲ್ ಸರಾಯಿ ಪೊಲೀಸ್ ಠಾಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಹಾಗೂ ಡಿಜಿಪಿ ನೀಡಿದ ಪ್ರಾಥಮಿಕ ತನಿಖಾ ವರದಿಯನ್ನು ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
25 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಪ್ರಕರಣವನ್ನು ಅಖಿಲೇಶ್ ಯಾದವ್ ಅವರು ನಿನ್ನೆಯಷ್ಟೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.
ರಾಜಘಾಟ್ ಸೇತುವೆ ಮೂಲಕ ಬಾಬಾ ಜೈ ಗುರುದೇವ್ ಸಭಾ ಆಯೋಜಿಸಿದ್ದ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ದುರಂತಕ್ಕೆ ಸೇತುವೆ ಕುಸಿದು ಬೀಳಲಿದೆ ಎಂಬ ವದಂತಿ ಕಾರಣ ಎನ್ನಲಾಗಿದೆ.