ಪ್ರಧಾನ ಸುದ್ದಿ

ಸ್ವೀಡಿಷ್ ಅಕಾಡೆಮಿ ಕರೆಗೆ ಸ್ಪಂದಿಸದ 2016 ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಬಾಬ್ ಡೈಲನ್

Guruprasad Narayana
ಸ್ಟಾಕ್ ಹಾಂ: ಬಾಬ್ ಡೈಲನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ ಸೋತಿದ್ದೇವೆ ಎಂದು ಅವರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಘೋಷಿಸಿದ ಹಲವು ದಿನಗಳ ನಂತರ ಸ್ವೀಡಿಷ್ ಅಕಾಡೆಮಿ ತಿಳಿಸಿದೆ. 
"ಸದ್ಯಕ್ಕೆ ನಾವೇನು ಮಾಡುತ್ತಿಲ್ಲ. ನಾನು ಅವರಿಗೆ ಕರೆ ಮಾಡಿದ್ದೇನೆ ಅವರ ಸಹದ್ಯೋಗಿಗಳಿಗೆ ಈಮೇಲ್ ಕಳುಹಿಸಿದ್ದೇನೆ. ಅದಕ್ಕೆ ಸ್ನೇಹಪೂರ್ವಕ ಉತ್ತರಗಳು ಬಂದಿವೆ. ಸದ್ಯಕ್ಕೆ ಅಷ್ಟು ಸಾಕು" ಎಂದು ಅಕಾಡೆಮಿಯ ಖಾಯಂ ಸದಸ್ಯೆ ಸಾರಾ ಡೇನಿಯಸ್ ಸೋಮವಾರ ಹೇಳಿದ್ದಾರೆ. 
ಕಳೆದ ಗುರುವಾರ ನೊಬೆಲ್ ಪ್ರಶಸ್ತಿ ಗೆದ್ದಾಗಿಂದಲೂ ಅಮೆರಿಕಾದ ಗೀತ ರಚನಕಾರ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಈ ಪ್ರಶಸ್ತಿ ಘೋಷಿಸುವಾಗ ಕೂಡ ಅವರು ಸಂಗೀತ ಕಛೇರಿ ಕೊಡುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಪ್ರಶಸ್ತಿಯ ಬಗ್ಗೆ ಅವರು ತುಟಿಬಿಚ್ಚಿಲ್ಲ. 
"ಆದರೆ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ನಂಬಿದ್ದೇನೆ" ಎಂದು ಡೇನಿಯಸ್ ಹೇಳಿದ್ದಾರೆ. 
ಪ್ರತಿವರ್ಷ ಡಿಸೆಂಬರ್ 10 ನೆಯ ತಾರೀಖು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ರಾಜ ಕಾರ್ಲ್ XVI ಅವರಿಂದ ಪ್ರಶಸ್ತಿ ಸ್ವೀಕರಿಸಿ, ಭಾಷಣ ಮಾಡಲು ವಿಜೇತರನ್ನು ಆಹ್ವಾನಿಸಲಾಗುತ್ತದೆ. 
ಈ ಕಾರ್ಯಕ್ರಮದಲ್ಲಿ ಡೈಲನ್ ಭಾಗಿಯಾಗಲಿದ್ದಾರೆಯೇ ಎಂದು ಸ್ವೀಡಿಷ್ ಅಕಾಡೆಮಿಗೆ ಇನ್ನು ಸುಳಿವು ಸಿಕ್ಕಿಲ್ಲ. "ಅವರಿಗೆ ಬರಲು ಇಷ್ಟವಿಲ್ಲದಿದ್ದರೆ ಅವರು ಬರುವುದಿಲ್ಲ. ಹೇಗಿದ್ದರೂ ಅದು ದೊಡ್ಡ ಕಾರ್ಯಕ್ರಮ ಮತ್ತು ಈ ಗೌರವ ಅವರಿಗೆ ಸೇರುತ್ತದೆ" ಎಂದು ಡೇನಿಯಸ್ ಹೇಳಿದ್ದಾರೆ. 
ಈ ಹಿಂದೆ ಖ್ಯಾತ ಫ್ರೆಂಚ್ ಸಾಹಿತಿ ಜಾನ್ ಪಾಲ್ ಸಾರ್ತ್ರ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 
SCROLL FOR NEXT