ಅಹಮದಾಬಾದ್: 33 ಜನರನ್ನು ಸಜೀವವಾಗಿ ಸುಟ್ಟುಹಾಕಲಾಗಿದ್ದ 2002 ಗೋಧ್ರಾ ನಂತರದ ಸರ್ದಾರ್ಪುರ ಗಲಭೆ ಪ್ರಕರಣದಲ್ಲಿ ಕೆಳಗಿನ ನ್ಯಾಯಾಲಯ ಶಿಕ್ಷೆ ನೀಡಿದ್ದ 31 ಜನರಲ್ಲಿ 14 ಜನರನ್ನು ಖುಲಾಸೆ ಮಾಡಿರುವ ಗುಜರಾತ್ ಹೈಕೋರ್ಟ್, 17 ಜನಕ್ಕೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.
ನ್ಯಾಯಾಧೀಶರುಗಳಾದ ಹರ್ಷ ದೇವಣಿ ಮತ್ತು ಬಿರೇನ್ ವೈಷ್ಣವ್ ಅವರುಗಳನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದ್ದ ಇನ್ನುಳಿದ 14 ಮಂದಿಗೆ, ಸಾಕ್ಷ್ಯಾಧಾರಗಳ ಕೊರತೆ ಮತ್ತು ಪ್ರತ್ಯಕ್ಷದರ್ಶಿಗಳ ದ್ವಂದ್ವ ಹೇಳಿಕೆಗಳಿಂದಾಗಿ ಖುಲಾಸೆ ಮಾಡಲಾಗಿದೆ.
ಸರ್ದಾರ್ಪುರ ಪ್ರಕರಣದಲ್ಲಿ 76 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು, ಅವರಲ್ಲಿ ಇಬ್ಬರು ವಿಚಾರಣೆ ನಡೆಯುವಾಗ ಮೃತರಾಗಿದ್ದರು ಮತ್ತು ಒಬ್ಬ ಬಾಲಾಪರಾಧಿಯಾಗಿದ್ದ. ಜೂನ್ 2009 ರಲ್ಲಿ ಉಳಿದ 73 ಜನರ ವಿರುದ್ಧ ಆರೋಪ ಹೊರಿಸಿ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತ್ತು.
ಕೆಳಗಿನ ನ್ಯಾಯಾಲಯ 42 ಜನರನ್ನು ಆರೋಪಮುಕ್ತರನ್ನಾಗಿಸಿ 31 ಜನರಿಗೆ ಶಿಕ್ಷೆ ನೀಡಿತ್ತು. ವಿಶೇಷ ತನಿಖಾ ದಳ ಈ 42 ಜನರಲ್ಲಿ 31 ಜನರನ್ನು ಆರೋಪಮುಕ್ತಗೊಳಿಸದ್ದಕ್ಕೆ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಆದರೆ ಹೈಕೋರ್ಟ್ ಮೆಹಸಾನಾ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.
ನವೆಂಬರ್ 9 2011 ರಂದು ವಿಶೇಷ ತನಿಖಾ ದಳದ ನ್ಯಾಯಾಲಯದ ನ್ಯಾಯಾಧೀಶ ಎಸ್ ಸಿ ಶ್ರೀವಾಸ್ತವ 31 ಜನಕ್ಕೆ 50 ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆ ನೀಡಿದ್ದರು.
ಗೋಧ್ರಾ ನಂತರ ನಡೆದ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ದಳ ತನಿಖೆ ನಡೆಸಿದ 9 ಪ್ರಕರಣಗಳಲ್ಲಿ ಇದು ಒಂದು.
ಅಲ್ಪಸಂಖ್ಯಾತರು ವಾಸವಿದ್ಧ ಸರ್ದಾರ್ಪುರ ಗ್ರಾಮದ 'ಶೇಕ್ ವಾಸ್' ಬೀದಿಯನ್ನು ಫೆಬ್ರವರಿ 28 ಮತ್ತು ಮಾರ್ಚ್ 1 2002 ರ ನಡುವೆ ಗುಂಪೊಂದು ಸುತ್ತುವರೆದಿತ್ತು. ಅಲ್ಪಸಂಖ್ಯಾತ ಸಮುದಾಯದವರು ಇಬ್ರಾಹಿಂ ಶೇಕ್ ಎಂಬುವವರ ಮನೆಯಲ್ಲಿ ಹೆದರಿ ಜಮಾಗೊಂಡಿದ್ದರು. ಆದರೆ ಗುಂಪು ಆ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರ ಪರಿಣಾಮ 22 ಮಹಿಳೆಯರು ಸೇರಿದಂತೆ 33 ಜನ ಸುಟ್ಟು ಕರುಕಲಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos