ಪ್ರಧಾನ ಸುದ್ದಿ

ಬಿಜೆಪಿ ಪಕ್ಷದ ಯಶವಂತ್ ಸಿನ್ಹ ನಿಯೋಗ ಭೇಟಿ ಮಾಡಿದ ಪ್ರತ್ಯೇಕವಾದಿ ಮುಖಂಡ ಗಿಲಾನಿ

Guruprasad Narayana
ಶ್ರೀನಗರ: ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹ ಮುಂದಾಳತ್ವದ ಐದು ಸದಸ್ಯರ ನಿಯೋಗವನ್ನು ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ತಮ್ಮ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಮೂರೂ ತಿಂಗಳಿನಿಂದ ನೆಲೆಸಿರುವ ಗಲಭೆಯ ಪರಿಹಾರದ ಚರ್ಚೆಗಾಗಿ ಈ ಸಭೆ ಏರ್ಪಡಿಸಲಾಗಿದೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿರುವ ಮಾಜಿ ಆಡಳಿತಾಧಿಕಾರಿ ವಜಾಹತ್ ಹಬೀಬುಲ್ಲಾ, ಮಾಜಿ ಏರ್ ವೈಸ್ ಮಾರ್ಷಲ್ ಕಪಿಲ್ ಕಾಕ್, ಪತ್ರಕರ್ತ ಭರತ್ ಭೂಷಣ್  ಮತ್ತು ಸಾಮಾಜಿಕ ಕಾರ್ಯಕರ್ತ ಸುಶೋಭಾ ಬಾರ್ವೆ ಈ ನಿಯೋಗದ ಇತರ ಸದಸ್ಯರಾಗಿದ್ದು, ಗಿಲಾನಿ ಅವರ ಮನೆಗೆ ತೆರಳಿದ್ದಾರೆ. 
ಗಿಲಾನಿ ಅವರನ್ನು ಮೂರೂ ತಿಂಗಳಿನಿಂದ ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಸಿನ್ಹ ನೇತೃತ್ವದ ನಿಯೋಗವನ್ನು ಭೇಟಿ ಮಾಡಲು ಒಪ್ಪಿಕೊಂಡಿರುವುದು ವಿಶೇಷ. ಏಕೆಂದರೆ ಸೆಪ್ಟೆಂಬರ್ 4 ರಂದು ಎಡ ಪಕ್ಷಗಳ ಮುಖಂಡ ಸೀತಾರಾಮ್ ಯೆಚೂರಿ ಮತ್ತು ಕೆಲವು ಬಿಜೆಪಿ ಸದಸ್ಯರು ಇದ್ದ ಸರ್ವಪಕ್ಷಗಳ ನಿಯೋಗವನ್ನು ಭೇಟಿ ಮಾಡಲು ಗಿಲಾನಿ ನಿರಾಕರಿಸಿದ್ದರು. 
ಮತ್ತೊಬ್ಬ ಹುರಿಯತ್ ನಾಯಕ ಮೀರ್ವೈಜ್ ಉಮರ್ ಪಾರುಕ್, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ನಾಯಕ ಯಾಸಿನ್ ಮಲಿಕ್ ಅವರನ್ನು ಕೂಡ ಸಿನ್ಹ ಭೇಟಿ ಮಾಡುವ ಸಾಧ್ಯತೆ ಇದೆ. 
"ನಾವು ಇಲ್ಲಿ ಮನುಷ್ಯತ್ವಕ್ಕಾಗಿ ಬಂದಿದ್ದೇವೆ. ನಾವು ಅವರ (ಕಾಶ್ಮೀರಿ ಜನರ) ನೋವು ಮತ್ತು ಕಷ್ಟಗಳನ್ನು ಆಲಿಸಲಿದ್ದೇವೆ. ರಾಜ್ಯದ ಗಲಭೆಗಳಿಗೆ ಪರಿಹಾರ ಸಿಗಲಿದೆ ಎಂದು ನಂಬಿದ್ದೇನೆ" ಎಂದು ಸಿನ್ಹ ಹೇಳಿದ್ದಾರೆ. 
ಜುಲೈ 8 ರಂದು ಭದ್ರತಾ ಪಡೆಗಳು ಹಿಜಬುಲ್ ಮುಜಾಹಿದ್ದೀನ್ ಮುಖಂಡ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿದಾಗಲಿಂದಲೂ, ಕಾಶ್ಮೀರ ಕುದಿಯುತ್ತಿದ್ದು, ಭದ್ರತಾ ಪಡೆಗಳ ಘರ್ಷಣೆಯೊಂದಿಗೆ ಇಲ್ಲಿಯವರೆಗೂ 92 ಜನ ಮೃತಪಟ್ಟಿದ್ದಾರೆ. 12 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಪೊಲೀಸರು ಇಲ್ಲಿಯವರೆಗೆ 7000 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.  
SCROLL FOR NEXT