ಬೆಂಗಳೂರು: ಮೈನಿಂಗ್ ಕಂಪನಿಗೆ ಪರವಾನಗಿ ನೀಡಲು ಕಿಕ್ ಬ್ಯಾಕ್ ಪಡೆದ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಬಿಗ್ ರಿಲೀಫ್ ನೀಡಿದ್ದು, ಬಿಎಸ್ ವೈ ಸೈರಿದಂತೆ ಎಲ್ಲ 13 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಕೇವಲ ಬಿಎಸ್ ಯಡಿಯೂರಪ್ಪ ಅವರು ಮಾತ್ರವಲ್ಲದೇ ಅವರ ಪುತ್ರರಾದ ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಜಿಂದಾಲ್ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಪ್ರಕರಣದ ಎಲ್ಲ ಆರೋಪಿಳನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಸುಮಾರು 400 ಪುಟಗಳ ತೀರ್ಪಿನ ಪ್ರಮುಖ ಅಂಶವನ್ನು ಮಾತ್ರ ಓದಿದ ನ್ಯಾಯಮೂರ್ತಿ ಅರ್ ಬಿ ಧರ್ಮಗೌಡರ್ ಅವರು, "ಬಿಎಸ್ ವೈ ಸೇರಿದಂತೆ ಎಲ್ಲ 13 ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದರು. ಅಂತೆಯೇ ಎಲ್ಲ 13 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದರು. ಇದಕ್ಕೂ ಮೊದಲು ಬಿಎಸ್ ವೈ ಪರ ವಾದ ಮಂಡಿಸಿದ್ದ ವಕೀಲ ಸಿವಿ ನಾಗೇಶ್ ಅವರು, ಯಡಿಯೂರಪ್ಪ ಅವರ ವಿರುದ್ಧ ದುರುದ್ದೇಶಪೂರಕವಾಗಿ ಆರೋಪ ಹೊರಿಸಲಾಗಿದೆ. ಯಡಿಯೂರಪ್ಪ ಅವರು ಯಾವುದೇ ಸಂದರ್ಭದಲ್ಲೂ ತಮ್ಮ ಅಧಿಕಾರವನ್ನು ಮತ್ತು ಮುಖ್ಯಮಂತ್ರಿಗಳ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ ಎಂದು ವಾದಿಸಿದ್ದರು.
ಇನ್ನು ಇಂದಿನ ವಿಚಾರಣೆಯಲ್ಲಿ ಸ್ವತಃ ಬಿಎಸ್ ಯಡಿಯೂರಪ್ಪ, ಅವರ ಪುತ್ರರಾದ ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಜಿಂದಾಲ್ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇದಲ್ಲದೆ ಬಿಎಸ್ ವೈ ಆಪ್ತ ಎಂಪಿ ರೇಣುಕಾಚಾರ್ಯ ಸೇರಿದಂತೆ ಅಪಾರ ಪ್ರಮಾಣದ ಬೆಂಬಲಿಗರು ಕಲಾಪದಲ್ಲಿ ಹಾಜರಿದ್ದರು.
ಶೂರಿಟಿ ಸಿದ್ಧಪಡಿಸಿಕೊಂಡೇ ಬಂದಿದ್ದ ಆರೋಪಿಗಳು
ಇನ್ನು ಬಿಎಸ್ ವೈ ಸೇರಿದಂತೆ ಪ್ರಕರಣದ ಎಲ್ಲ 13 ಮಂದಿ ಆರೋಪಿಗಳು ಜಾಮೀನಿಗಾಗಿ ಶೂರಿಟಿ ಸಿದ್ಧಪಡಿಸಿಕೊಂಡೇ ಆಗಮಿಸಿದ್ದರು. ಪ್ರಕರಣದಲ್ಲಿ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದರೆ ನ್ಯಾಯಾಲಯ ಜಾಮೀನು ನೀಡುವ ಅವಕಾಶ ಇದೆ. ಹೀಗಾಗಿ ಎಲ್ಲ ಆರೋಪಿಗಳು ಜಾಮೀನಿಗಾಗಿ ಶೂರಿಟಿ ಸಿದ್ಧಪಡಿಸಿಕೊಂಡೇ ಬಂದಿದ್ದರು ಎಂದು ಹೇಳಲಾಗುತ್ತಿದೆ.