ಬೆಂಗಳೂರು: ಮೈನಿಂಗ್ ಕಂಪನಿಗೆ ಪರವಾನಗಿ ನೀಡಲು ಕಿಕ್ ಬ್ಯಾಕ್ ಪಡೆದ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪ್ರಕರಣದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಇನ್ನು ಕೆಲವೇ ಹೊತ್ತಿನಲ್ಲಿ ತನ್ನ ತೀರ್ಪು ಪ್ರಕಟಿಸಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಗೂ ಅವರ ಕುಟುಂಬ ಸದಸ್ಯರ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಸೌತ್ ವೆಸ್ಟ್ ಗಣಿ ಕಂಪನಿಗೆ ಪರವಾನಗಿ ನೀಡಿದ್ದಕ್ಕೆ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್ ಬ್ಯಾಕ್ ಆರೋಪ ಪ್ರಕರಣದ ತೀರ್ಪು ಇಂದು ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕಟಗೊಳ್ಳಲಿದೆ. ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬಿಎಸ್ ವೈ ಸೇರಿದಂತೆ 13 ಮಂದಿ ಆರೋಪಿಗಳ ಪಟ್ಟಿಯಲ್ಲಿ ಅವರ ಪುತ್ರರಾದ ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ ಹಾಗೂ ಅಳಿಯ ಸೋಹನ್ಕುಮಾರ್ಅವರ ಹೆಸರೂ ಕೂಡ ಕೇಳಿ ಬಂದಿದ್ದು, ಅವರ ವಿರುದ್ಧ ತೀರ್ಪು ಕೂಡ ಇಂದೇ ಘೋಷಣೆಯಾಗುವ ಸಾಧ್ಯತೆ ಇದೆ.
ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಡಿಯೂರಪ್ಪ ಅವರು ಜಿಂದಾಲ್ ಗ್ರೂಪ್‌ನ ಮಾಲೀಕತ್ವವಿರುವ ಸೌತವೆಸ್ಟ್ ಮೈನಿಂಗ್ ಕಂಪನಿಗೆ ಗಣಿ ಪರವಾನಗಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸೌತವೆಸ್ಟ್ ಕಂಪನಿಯು ಯಡಿಯೂರಪ್ಪ ಪುತ್ರರ ಒಡೆತನದ ಪ್ರೇರಣಾ ಟ್ರಸ್ಟ್‌ಗೆ ಅಪಾರ ಪ್ರಮಾಣದ ದೇಣಿಗೆ ನೀಡಿತ್ತು ಎಂದು ಆರೋಪಿಸಲಾಗಿತ್ತು. 2006ರ ಮಾರ್ಚ್ ನಂತರ 2011ರವರೆಗೆ ಸುಮಾರು 20 ಕೋಟಿ ರು. ಹಣವನ್ನು ಸೌತ್ ವೆಸ್ಟ್ ಮೈನಿಂಗ್ ಕಂಪೆನಿಯಿಂದ ಯಡಿಯೂರಪ್ಪ ಪಡೆದಿದ್ದರು. ಈ ಪೈಕಿ ಬಿಎಸ್ ವೈಪುತ್ರರಾದ ವಿಜಯೇಂದ್ರ, ರಾಘವೇಂದ್ರ, ಸೋಹನ್ ಕುಮಾರ್ ಶಾಮೀಲಾಗಿರುವ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಸಮಾಜ ಪರಿವರ್ತನಾ ಸಮಿತಿಯ ಅಧ್ಯಕ್ಷರಾದ ಎಸ್ ಆರ್ ಹಿರೇಮಠ್ ಅವರು ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಅಲ್ಲದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅವರು ಸೌತ್ವೆಸ್ಟ್ಮೈನಿಂಗ್ಕಂಪನಿಗೆ ಪರವಾನಗಿ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದ್ದು ತನಿಖೆ ನಡೆಸಲು ಆದೇಶಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆ ನಡೆಸಿದ್ದ ಸುಪ್ರೀಂ ಕೋರ್ಟ್ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು.
ಸಿಬಿಐ ಕೂಡ ತನ್ನ ಪ್ರಾಥಮಿಕ ತನಿಖೆ ನಡೆಸಿ ಯಡಿಯೂರಪ್ಪ ಮತ್ತು ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ಕುಮಾರ್, ಪ್ರೇರಣ ಟ್ರಸ್ಟ್ ನ ಇಬ್ಬರು ಸಿಬ್ಬಂದಿ ಹಾಗೂ ಸೌತ್ವೆಸ್ಟ್ ಮೈನಿಂಗ್ ಸಿಬ್ಬಂದಿ ಸೇರಿ 13 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಇಂದು ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ.