ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ ಆರೋಪ; ಥಾನೆ ಜೈಲರ್ ವಜಾ
ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕಾರಾಗೃಹ ಇಲಾಖೆ, ಥಾನೆ ಜಿಲ್ಲಾ ಜೈಲಿನ ಸೂಪರಿಂಟೆಂಡೆಂಟ್ ಹೀರಾಲಾಲ್ ಜಾಧವ್ ಅವರನ್ನು ವಜಾ ಮಾಡಿದೆ.
ಮುಂಬೈ: ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕಾರಾಗೃಹ ಇಲಾಖೆ, ಥಾನೆ ಜಿಲ್ಲಾ ಜೈಲಿನ ಸೂಪರಿಂಟೆಂಡೆಂಟ್ ಹೀರಾಲಾಲ್ ಜಾಧವ್ ಅವರನ್ನು ವಜಾ ಮಾಡಿದೆ. ಈ ಉಚ್ಛಾಟನೆಯನ್ನು ಧೃಢೀಕರಿಸಿರುವ ಡಿ ಐ ಜಿ ಭೂಷಣ್ ಉಪಾಧ್ಯಾಯ "ಜಾಧವ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಹಿರಿಯ ಪೊಲೀಸರಿಂದ ಇಂತಹ ನಡೆ ಆಕ್ಷೇಪಣೀಯ" ಎಂದು ಹೇಳಿದ್ದಾರೆ.
ನೆನ್ನೆಯಷ್ಟೇ ಜಾಧವ್ ಥಾನೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಎಂ ಎಂ ವಾಲಿಮೊಹಮ್ಮದ್ ವಿಚಾರಣೆಯನ್ನು ಮುಂದೂಡಿ, ಪ್ರಾಸೆಕ್ಯೂಶನ್ ವಕೀಲರಿಂದ ಪ್ರತಿಕ್ರಿಯೆ ಕೇಳಿದ್ದರು. ಐ ಪಿ ಸಿ ಸೆಕ್ಷನ್ 354 ರಡಿ ಪೊಲೀಸರು ಜಾಧವ್ ವಿರುದ್ಧ ಆಗಸ್ಟ್ 31 ರಂದು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು.
ಜಾಧವ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 31 ವರ್ಷದ ಮಹಿಳಾ ಪೇದೆ ದೂರು ನೀಡಿದ್ದರು.