ಅಹಮದಾಬಾದ್: ಹಿಂದೂಗಳ ಮತ್ತು ಜೈನರ ಭಾವನೆಗಳಿಗೆ ಮೊಬೈಲ್ ಫೋನುಗಳಲ್ಲಿ ಆಡಲಾಗುವ ಪೋಕೆಮಾನ್ ಗೋ ಆಟ ಧಕ್ಕೆಯುಂಟುಮಾಡುವುದರಿಂದ ಈ ಆಟವನ್ನು ನಿಷೇಧಿಸಬೇಕೆಂದು ಕೋರಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಗುಜರಾತ್ ಹೈಕೋರ್ಟ್ ನಾಲ್ಕು ವಾರಗಳಲ್ಲಿ ಇದಕ್ಕೆ ಪ್ರತಿಕ್ರಿಯಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೇಳಿದೆ.
"ಈ ಆಟ ಆಡುವಾಗ, ಹಿಂದೂ ಮಾತು ಜೈನರು ಪೂಜಿಸುವ ದೇವಾಲಯಗಳಲ್ಲಿ ಮೊಟ್ಟೆಯ ಆಕಾರದಲ್ಲಿ ಸ್ಥಳಗಳನ್ನು ಬಿಂಬಿಸಿ ಮೊಬೈಲ್ ಪರದೆ ಮೇಲೆ ತೋರಿಸಲಾಗುತ್ತದೆ. ಹಿಂದೂ ಮತ್ತು ಜೈನ ದೇವಾಲಯಗಳಲ್ಲಿ ಮೊಟ್ಟೆಗಳನ್ನು ತೋರಿಸುವುದು ಧರ್ಮನಿಂದೆ. ಆದುದರಿಂದ ಈ ಆಟವನ್ನು ಭಾರತದಲ್ಲಿ ನಿಷೇಧಿಸಬೇಕು" ಎಂದು ಕೋರಿ ಅಲಾಯ್ ಅನಿಲ್ ದಾವೆ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಪರವಾಗಿ ವಕೀಲ ನಚಿಕೇತ್ ದಾವೆ ವಾದ ಮಂಡಿಸಿದ್ದರು.
ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಈ ಗೇಮ್ ಅಭಿವೃದ್ಧಿ ಸಂಸ್ಥೆ ನಿಆಂಟಿಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರತಿವಾದಿಗಳನ್ನಾಗಿ ಅರ್ಜಿದಾರ ನಮೂದಿಸಿದ್ದರು.