ನವದೆಹಲಿ: ನಾನು ಭಾರತಕ್ಕೆ ಬರಬೇಕು. ಆದರೆ ಭಾರತೀಯ ಅಧಿಕಾರಿಗಳು ನನ್ನ ಪಾಸ್ ಪೋರ್ಟ್ ಅನ್ನು ಅಮಾನತು ಮಾಡಿದ್ದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು, ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಶುಕ್ರವಾರ ದೆಹಲಿ ಕೋರ್ಟ್ ಗೆ ತಿಳಿಸಿದ್ದಾರೆ.
ಕಳೆದ ಜುಲೈ 9ರಂದು ಖುದ್ದು ಹಾಜರಾಗಲು ವಿನಾಯ್ತಿ ನೀಡಲು ನಿರಾಕರಿಸಿದ್ದ ವಿಜಯ್ ಮಲ್ಯಗೆ ಇಂದು ಖುದ್ದು ಹಾಜರಾಗುವಂತೆ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಅವರು ಸೂಚಿಸಿದ್ದರು. ಆದರೆ ವಿಚಾರಣೆಗೆ ಹಾಜರಾಗದೆ ತಮ್ಮ ವಕೀಲ ರಮೇಶ್ ಗುಪ್ತಾ ಅವರ ಮೂಲಕ ಇ-ಮೇಲ್ ಪ್ರತಿಯನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.
ಮೇಲ್ ನಲ್ಲಿ, ನಾನು ಭಾರತಕ್ಕೆ ಬರಬೇಕು ಎಂದು ಬಯಸಿದ್ದೇನೆ. ಆದರೆ ಏಪ್ರಿಲ್ 23, 2016ರಂದು ಭಾರತೀಯ ಅಧಿಕಾರಿಗಳು ನನ್ನ ಪಾಸ್ ಪೋರ್ಟ್ ಅಮಾನತುಗೊಳಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಕಾಲವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ವಿಜಯ್ ಮಲ್ಯ ಅವರು ಈಗಾಗಲೇ ಹಲವು ಪ್ರಕರಣಗಳಲ್ಲಿ ಕೋರ್ಟ್ ಗಳು ನೀಡಿದ್ದ ಸಮನ್ಸ್ ಅನ್ನು ಉಲ್ಲಂಘಿಸಿದ್ದಾರೆ ಮತ್ತು ಪದೇಪದೆ ಇದೇ ರೀತಿ ಸಮಯವಕಾಶ ಕೇಳಿದ್ದಾರೆ ಎಂದು ಜಾರಿ ನಿರ್ದೇಶನಾಯಲಯ(ಇಡಿ) ವಾದಿಸಿತು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ.
ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ವಿಜಯ್ ಮಲ್ಯ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ವಿಚಾರಣೆಗೆ ಹಾಜರಾಗದ ಮಲ್ಯ ವಿರುದ್ಧ ಇಡಿ ಕೋರ್ಟ್ ಮೆಟ್ಟಿಲೇರಿದೆ.
ಮದ್ಯದ ದೊರೆ ಮಲ್ಯ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸಬೇಕಾಗಿದೆ. ಮಾರ್ಚ್ ನಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಮಲ್ಯ ಸದ್ಯ ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾರತ ಸರ್ಕಾರ ಮಲ್ಯ ಅವರ ಪಾಸ್ ಪೋರ್ಟ್ ಅನ್ನು ರದ್ದುಪಡಿಸಿದೆ. ಅಲ್ಲದೆ ಮುಂಬೈ ಕೋರ್ಟ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದೆ.