ಆರ್ ಜೆ ಡಿ ಮಾಜಿ ಸಂಸದ, ಕುಖ್ಯಾತ ರೌಡಿ ಮೊಹಮದ್ ಶಹಾಬುದ್ದೀನ್
ನವದೆಹಲಿ: ಮಹಾ ಮೈತ್ರಿ ಪಕ್ಷದ ನಾಯಕರಲ್ಲಿ ಒಬ್ಬರಾದ ಲಾಲು ಪ್ರಸಾದ್ ಯಾದವ್ ಅವರ ವಿರೋಧಿ ನಡೆಯಲ್ಲಿ, ಬಿಹಾರ ಮುಖಮಂತ್ರಿ ನಿತೀಶ್ ಕುಮಾರ್, ಆರ್ ಜೆ ಡಿ ಮಾಜಿ ಸಂಸದ, ಕುಖ್ಯಾತ ರೌಡಿ ಮತ್ತು ರಾಜಕಾರಣಿ ಮೊಹಮದ್ ಶಹಾಬುದ್ದೀನ್ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ.
ನೈತಿಕತೆಯ ಕಾರಣಗಳಿಂದಾಗಿ, ಹಾಗು ರೌಡಿಗಳು ಮತ್ತು ದುಷ್ಕರ್ಮಿಗಳ ಬಗ್ಗೆ ಯಾವುದೇ ಮೆದು ಧೋರಣೆ ತಳೆಯಲು ನಿರಾಕರಿಸಿರುವ ನಿತೀಶ್, ಸದ್ಯಕ್ಕೆ ಸರ್ಕಾರಕ್ಕೆ ಅಂಟಿರುವ ಮಸಿಯನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ. ಪಾಟ್ನಾ ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಿದ್ದಾರೆ.
ಸಹೋದರನ ಕೊಲೆ ಪ್ರಕರಣದಲ್ಲಿ ಶಹಾಬುದ್ದೀನ್ ಗೆ ಸೆಪ್ಟೆಂಬರ್ 7 ರಂದು ಜಾಮೀನು ನೀಡಲಾಗಿತ್ತು. ಫೆಬ್ರವರಿ 3 ರಂದು ಸರ್ಕಾರಕ್ಕೆ ಆದೇಶ ನೀಡಿದ್ದ ಕೋರ್ಟ್, ಒಂಭತ್ತು ತಿಂಗಳಲ್ಲಿ ತನಿಖೆ ನಡೆಸಲು ಸೂಚಿಸಿತ್ತು. ಆದರೆ ಇದರಲ್ಲಿ ವಿಫಲವಾದ ಸರ್ಕಾರ ಶಹಾಬುದ್ದೀನ್ ಜಾಮೀನಿಗೆ ಹಾದಿ ಸುಗಮಮಾಡಿಕೊಟ್ಟಿತ್ತು.
"ಜಂಗಲ್ ರಾಜ್ ಹಿಂದಿರುಗಿದೆ" ಎಂಬ ಘೋಷಣೆಯನ್ನು ಮೊಳಗಿಸುತ್ತಿರುವ ಬಿಜೆಪಿ ಪಕ್ಷ ಈಗ ಈ ಪ್ರಕರಣದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಶಹಾಬುದ್ದೀನ್ ಗೆ ಜಾಮೀನು ದೊರಕಲೆಂದೇ ಈ ಪ್ರಕರಣದಲ್ಲಿ ಸರ್ಕಾರ ದುರ್ಬಲ ಕಾನೂನು ಸಲಹೆಗಾರರನ್ನು ನೇಮಿಸಿದೆ ಎಂದು ಬಿಜೆಪಿ ದೂರಿದೆ.
ಈ ಮಧ್ಯೆ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಆರೋಪಿ ಮತ್ತು ತಲೆಮರೆಸಿಕೊಂಡಿರುವ ವ್ಯಕ್ತಿ ಮೊಹಮದ್ ಕೈಫ್ ಹಾಗು ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪುತ್ರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಒಟ್ಟಿಗೆ ಇರುವ ಫೋಟೋ ಬುಧವಾರ ಲಭ್ಯವಾಗಿದ್ದು, ವಿವಾದವನ್ನು ತೀವ್ರಗೊಳಿಸಿದೆ. ಭಗಲಾಪುರ ಜೈಲಿನಿಂದ ಶಹಾಬುದ್ದೀನ್ ಬಿಡುಗಡೆ ಸಮಯದಲ್ಲಿ ಯಾದವ್ ಮತ್ತು ಕೈಫ್ ಅವರ ಜೊತೆ ಇರುವ ಫೋಟೋಗಳು ಮತ್ತು ವಿಡಿಯೋಗಳು ಬಹುಚರ್ಚಿತವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos