ಬೆಂಗಳೂರು: ಕರ್ನಾಟಕದಲ್ಲಿ ತಮಿಳರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸುತ್ತಿರುವುದನ್ನು ಖಂಡಿಸಿ ಹಾಗೂ ಕಾವೇರಿ ವಿವಾದಕ್ಕೆ ಶಾಸ್ವತ ಪರಿಹಾರಕ್ಕೆ ಒತ್ತಾಯಿಸಿ ನಾಳೆ ತಮಿಳುನಾಡು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ರಕ್ಷಣೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
ತಮಿಳುನಾಡಿನಲ್ಲಿ ನಾಳೆ ಕೆಲವು ಸಂಘಟನೆಗಳು ಬಂದ್‍ಗೆ ಕರೆ ನೀಡಿರುವ ವಿಚಾರ ತಿಳಿದು ನನಗೆ ಕಳವಳವಾಗಿದೆ. ಈ ವೇಳೆ ಎರಡು ರಾಜ್ಯಗಳ ಜನರ ನಡುವೆ ವೈರತ್ವ ಬೆಳೆದರೆ ಇದರಿಂದ ಎರಡೂ ರಾಜ್ಯಗಳಿಗೆ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ನಿಮ್ಮಲ್ಲಿ ನಡೆಯುವ ಬಂದ್ ವೇಳೆ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ ತಮಿಳುನಾಡಿನಲ್ಲಿರುವ ಕನ್ನಡಿಗರ ಜೀವ ರಕ್ಷಣೆ ಹಾಗೂ ಅವರ ಆಸ್ತಿ ಪಾಸ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಈ ಮಧ್ಯೆ ರೈತಪರ ಸಂಘಟನೆಗಳು ಹಾಗೂ ವ್ಯಾಪಾರಿಗಳು ಕರೆ ನೀಡಿರುವ ತಮಿಳುನಾಡು ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ತಮಿಳುನಾಡು ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷದ ವರಿಷ್ಠ ಕರುಣಾನಿಧಿ ಅವರು ಬೆಂಬಲ ಘೋಷಿಸಿದ್ದಾರೆ.