ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕಠಿಣ ನಿಲುವು ತಾಳುವ ಸಾಧ್ಯತೆ ಇದೆ.
ತಮಿಳುನಾಡಿಗೆ ಮತ್ತೆ 42 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿರುವ ಸಿಎಂ, ತಮಿಳುನಾಡಿಗೆ ಈಗ ಕಾವೇರಿ ನೀರು ಬಿಡುವುದು ಕಷ್ಟ ಮತ್ತು ನೀರು ಬಿಡಲು ಸಾಧ್ಯವೆ ಎಂದು ಸ್ಪಷ್ಟಪಡಿಸಿದ್ದು, ಕಾವೇರಿ ವಿಚಾರದಲ್ಲಿ ಈಗ ನಿರ್ಣಾಯಕ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಹಿರಿಯ ಕಾಂಗ್ರೆಸ್ ನಾಯಕರಿಗೆ ಕರೆ ಮಾಡಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮತ್ತು ರಾಜ್ಯ ಸರ್ಕಾರ ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದ ಜಲಾಶಯಗಳಲ್ಲಿ ನೀರು ಇಲ್ಲ ಎಂಬುದನ್ನು ಅಂಕಿ-ಅಂಶಗಳ ಸಮೇತ ಕಾನೂನು ತಜ್ಞರು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಸುಪ್ರೀಂ ಕೋರ್ಟ್ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಈ ಆದೇಶ ಪಾಲಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚಿಸಲು ನಾಳೆ ಬೆಳಗ್ಗೆ ಸಚಿವ ಸಂಪುಟ ಸಭೆ ಕರೆದಿದ್ದು, ಸಭೆಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಅಲ್ಲದೆ ಸಂಜೆ 5 ಗಂಟೆಗೆ ಪ್ರತಿಪಕ್ಷಗಳ ನಾಯಕರ ಸಭೆ ಕರೆದಿದ್ದು, ಈ ಸಭೆಗೆ ರಾಜ್ಯದ ಎಲ್ಲಾ ಸಂಸದರಿಗೂ ಆಹ್ವಾನ ನೀಡಲಾಗಿದೆ ಎಂದರು.