ನವದೆಹಲಿ: ಇನ್ನುಮುಂದೆ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯದ ಪರ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
ಕಾವೇರಿ ನೀರಿಗಾಗಿ ತಮಿಳುನಾಡು ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಈ ವೇಳೆ ರಾಜ್ಯದ ಪರವಾಗಿ ವಾದ ಮಂಡಿಸಿದ ನಾರಿಮನ್ ಅವರು, ತಮಿಳುನಾಡಿಗೆ ಇನ್ನು ಮುಂದೆ ನೀರು ಬಿಡಲು ಸಾಧ್ಯವಿಲ್ಲ. ನಮಗೆ ನೀರೇ ಇಲ್ಲ ಎಂದ ಮೇಲೆ ನೀರು ಬಿಡುವುದು ಹೇಗೆ. ಹಾಗಾಗಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕೋರ್ಟ್ ನಿಂದ ಯಾವುದೇ ತಾತ್ಕಾಲಿಕ ಆದೇಶ ಬೇಡ ಎಂದು ಮನವಿ ಮಾಡಿದರು
ನೀರು ಹಂಚಿಕೆ ವಿಚಾರ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಬಿಡಿ. ಅಪರೂಪಕೊಮ್ಮೆ ಸಾಮಾನ್ಯ ವರ್ಷದಂತೆ ಮಳೆಯಾಗುತ್ತದೆ. ಹೀಗಾಗಿ ಈ ವರ್ಷ ಜಲ ಸಂಕಷ್ಟದ ವರ್ಷ ಎಂದು ಮೇಲುಸ್ತುವಾರಿ ಸಮಿತಿಯೇ ಹೇಳಿದೆ. ಆದಾಗ್ಯೂ 10 ದಿನಗಳ ಕಾಲ ದಿನಂಪ್ರತಿ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಮೇಲುಸ್ತುವಾರಿ ಸಮಿತಿ ಆದೇಶಿಸಿದ್ದು, ಅದನ್ನು ನಾವು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ನಾರಿಮನ್ ತಿಳಿಸಿದರು.
ನಾರಿಮನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ವಕೀಲರು, ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶದಿಂದ ನಾವು ನೊಂದಿದ್ದೇವೆ ಮತ್ತು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ವಾದಿಸಿದರು.