ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಬಿಳುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಮಂಗಳವಾರ ತಾವು ಚಿಕಿತ್ಸೆ ಪಡೆಯುತ್ತಿರುವ ಅಪೊಲೋ ಆಸ್ಪತ್ರೆಯಲ್ಲೇ ಲೋಕೋಪಯೋಗಿ ಸಚಿವ ಕೆ.ಪಳನಿಸಾಮಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಯಲಲಿತಾ ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ 23ರಿಂದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ತಮ್ಮ ಕೊಠಡಿಯಲ್ಲೇ ಸಭೆ ನಡೆಸಿ, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಮೂರು ದಿನಗಳ ಕಾಲ ಒಟ್ಟು 18 ಸಾವಿರ ಕ್ಯೂಸೆರ್ ನೀರು ಬಿಡುವಂತೆ ಆದೇಶಿಸಿದ್ದು, ವಿಚಾರಣೆಯನ್ನು ಸೆ.30ರಂದು ಮಧ್ಯಾಹ್ನ 2ಗಂಟೆಗೆ ಮುಂದೂಡಿರುವ ಬಗ್ಗೆ ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು. ಅಲ್ಲದೆ ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳ ಮುಖ್ಯಸ್ಥರ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವುದನ್ನು ಜಯಾ ಗಮನಕ್ಕೆ ತರಲಾಯಿತು.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ವಿವರವಾಗಿ ಚರ್ಚಿಸಿದ ನಂತರ ಜಯಲಲಿತಾ ಅವರು, ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಸೆ.29ರಂದು ಕರೆದಿರುವ ಸಭೆಗೆ ರಾಜ್ಯದ ಪರವಾಗಿ ಹಾಜರಾಗುವಂತೆ ಸಚಿವ ಕೆ. ಪಳನಿಸಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರಾಮ ಮೋಹನ್ ರಾವ್, ಲೋಕೋಪಯೋಗಿ ಕಾರ್ಯದರ್ಶಿ ಎಸ್.ಕೆ.ಪ್ರಭಾಕರ್ ಮತ್ತು ಕಾವೇರಿ ತಾಂತ್ರಿಕ ಘಟಕದ ಅಧ್ಯಕ್ಷ ಆರ್.ಸುಬ್ರಮಣಿಯನ್ ಅವರಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics