ಹೈದರಾಬಾದ್: ಬಾಲ್ಯಕಾಲದ ಗೆಳೆಯ ತನ್ನ ಕಣ್ಣುಮುಂದೆಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನ್ನು ನೋಡಿದ ಯುವಕನೊಬ್ಬ ಆಘಾತದಿಂದ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಇಬ್ಬರು ಗೆಳೆಯರು ದ್ವಿಚಕ್ರ ವಾಹನದಲ್ಲಿ ಕುಕಟ್ಪಲ್ಲಿ ಬಳಿಯ ಮುಸಪೇಟ್ ಬಳಿ ಚಲಿಸುವಾಗ ಅಪಘಾತಕ್ಕೆ ಒಳಗಾಗಿದ್ದಾರೆ. ಟ್ರಕ್ ಒಂದು ದ್ವಿಚಕ್ರ ವಾಹನಕ್ಕೆ ಗುದ್ದಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಟೆಕ್ಕಿ ಜಿ ಹರಿಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕೆ ರಮೇಶ್ ಈ ಅಪಘಾತದಲ್ಲಿ ಉಳಿದುಕೊಂಡರು, ತನ್ನ ಬಾಲ್ಯಕಾಲದ ಗೆಳೆಯನ ಸಾವಿನಿಂದ ಆಘಾತಗೊಂಡು ಹತ್ತಿರದ ಪ್ರದೇಶ ಭರತ್ ನಗರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಲಿಸುತ್ತಿರುವ ರೈಲಿಗೆ ಅಡ್ಡ ಬಿದ್ದು ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿರುವ ಪೊಲೀಸರು ರೈಲ್ವೆ ಹಳಿಯ ಮೇಲೆ ದೇಹವನ್ನು ಪತ್ತೆಹಚ್ಚಿದ್ದಾರೆ.
ಆಂಧ್ರ ಪ್ರದೇಶದ ಗುಂಟೂರು ಮೂಲದ 20 ರ ಆಸುಪಾಸಿನ ಯುವಕರು ಕುಕಟ್ಪಲ್ಲಿಯಲ್ಲಿ ಒಟ್ಟಿಗೆ ಹಾಸ್ಟೆಲ್ ನಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹರಿಕೃಷ್ಣ ಕೆಲವೇ ದಿನಗಳ ಹಿಂದೆ ಮಲೇಶಿಯಾದಿಂದ ಹಿಂದಿರುಗಿದ್ದರು. ರಮೇಶ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಈ ಘಟನೆ ಎರಡು ಕುಟುಂಬಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics