ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಗೌಹಾಟಿ: ಆರ್ ಎಸ್ ಎಸ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಮಿನ ಪ್ರಾದೇಶಿಕ ಕೋರ್ಟ್ ನಲ್ಲಿ ಖುದ್ದು ಹಾಜರಾಗಿದ್ದಾರೆ.
"ಅವರು (ಆರ್ ಎಸ್ ಎಸ್) ದೇಶವನ್ನು ಒಡೆಯುತ್ತಿದ್ದಾರೆ ಮತ್ತು ನಾನು ಅವರ ವಿರುದ್ಧ ಹೋರಾಡುತ್ತಿದ್ದೇನೆ. ನಾನು ಇದಕ್ಕೆ ಹೆದರುವುದಿಲ್ಲ ಮತ್ತು ಬಡತನ, ನಿರುದ್ಯೋಗ ಮತ್ತು ಅಭಿವೃದ್ಧಿ ವಿರೋಧಿಗಳ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ" ಎಂದು ಮುಖ್ಯ ನ್ಯಾಯಾಂಗ ಮೆಜೆಸ್ಟ್ರೇಟ್ ಎದುರು ಹಾಜಾರಾದ ನಂತರ ಗಾಂಧಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನೊಬ್ಬ ಕಳೆದ ವರ್ಷ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕ್ಕದ್ದಮೆ ಹೂಡಿದ್ದರು. ಹಲವಾರು ಸಾಕ್ಷಿಗಳನ್ನು ವಿಚಾರಿಸಿದ್ದ ಮುಖ್ಯ ನ್ಯಾಯಾಂಗ ಮೆಜೆಸ್ಟ್ರೇಟ್ ಸೆಪ್ಟೆಂಬರ್ 29 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿ ಅವರಿಗೆ ಆದೇಶಿಸಿದ್ದರು.
"ಅವರು (ಭಾರತೀಯ ಜನತಾ ಪಕ್ಷ), ಉತ್ತರ ಪ್ರದೇಶದ ನನ್ನ 30 ದಿನಗಳ ಪ್ರವಾಸಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಇಂತಹ ಪ್ರಕರಣಗಳನ್ನು ನನ್ನ ವಿರುದ್ಧ ದಾಖಲಿಸುತ್ತಿದ್ದಾರೆ" ಎಂದಿರುವ ರಾಹುಲ್ ನನ್ನ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 12 ರಂದು ಬರ್ಪೆಟ್ ನ 16 ನೇ ಶತಮಾನದ ವೈಷ್ಣವ ದೇವಾಲಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ, ದೇವಾಲಯಕ್ಕೆ ಪ್ರವೇಶ ನೀಡದಂತೆ ಆರ್ ಎಸ್ ಎಸ್ ಪಿತೂರಿ ಮಾಡಿತ್ತು. ಪ್ರಾದೇಶಿಕ ಮಹಿಳೆಯರಿಗೆ ಆರ್ ಎಸ್ ಎಸ್ ಚಿತಾವಣೆ ಮಾಡಿ ದೇವಾಲಯದ ಒಳಕ್ಕೆ ಹೋಗದಂತೆ ತಡೆಯಲಾಗಿತ್ತು ಎಂದು ರಾಹುಲ್ ದೂರಿದ್ದರು.
ಈ ಘಟನೆಯಲ್ಲಿ ಆರ್ ಎಸ್ ಎಸ್ ನ ಯಾವುದೇ ಪಾತ್ರವಿಲ್ಲ ಎಂದು ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ಆರ್ ಎಸ್ ಎಸ್ ಕಾರ್ಯಕರ್ತನೊಬ್ಬ ಮಾನನಷ್ಟ ಮೊಕದ್ದಮೆಯಮ್ಮು ಹೂಡಿದ್ದಲ್ಲದೆ, ಇದು ದೇವಾಲಯದ ಹೆಸರಿಗೂ ಹಾನಿ ಮಾಡಿದೆ ಎಂದು ದೂರಿದ್ದರು.