ನವದೆಹಲಿ: ಸದ್ಯ ಕರ್ನಾಟಕದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲಾಗುವುದು. ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಕರ್ನಾಟಕ- ತಮಿಳುನಾಡು ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ವಾಸ್ತವಾಂಶ ತಿಳಿದುಕೊಳ್ಳಲು ಎರಡು ರಾಜ್ಯಗಳಿಗೆ ತಜ್ಞರ ತಂಡ ಕುಳುಹಿಸುವಂತೆ ನಾವು ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ಸುಪ್ರೀಂ ಕೋರ್ಟ್ ನಲ್ಲೂ ಇದಕ್ಕೆ ವಿರೋಧಿಸಿದ್ದೇವೆ ಎಂದಿದೆ. ಹೀಗಾಗಿ ಇಂದಿನ ಸಂಧಾನ ಸಭೆ ವಿಫಲವಾಗಿದೆ ಎಂದರು.
ನಮಗೆ ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವವಿದೆ. ಹೀಗಾಗಿಯೇ ನಾವು ಮೊದಲು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿ ನೀರು ಬಿಟ್ಟಿದ್ದೇವೆ. ಆದರೆ ಈಗ ಮತ್ತೆ ನೀರು ಬಿಡುವಂತೆ ಆದೇಶ ನೀಡಿದೆ. ಈ ಸಂಬಂಧ ಸೆ.23ರಂದು ವಿಧಾನಮಂಡಲ ವಿಶೇಷ ಅಧಿವೇಶನ ಕರೆದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕದಲ್ಲಿ ಈಗ ಕುಡಿಯುವ ನೀರಿಗೆ ಕೊರೆತೆ ಇದೆ. ತಮಿಳುನಾಡಿನಲ್ಲಿ ತತ್ ತಕ್ಷಣಕ್ಕೆ ನೀರಿನ ಅಗತ್ಯ ಇಲ್ಲ. ಆದರೂ ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ಇದೆಲ್ಲವನ್ನೂ ನಾಳೆ ಸುಪ್ರೀಂ ಕೋರ್ಟ್ ಗೆ ತಿಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ರ್ನಾಟಕದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂಬಿ ಪಾಟೀಲ್, ಟಿಬಿ ಜಯಚಂದ್ರ, ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ನೀರಾವರಿ ಇಲಾಖೆ ಕಾರ್ಯರ್ಶಿ ರಾಕೇಶ್ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.
ತಮಿಳುನಾಡು ಸರ್ಕಾರದ ಪರವಾಗಿ ಪಿಡಬ್ಲ್ಯುಡಿ ಸಚಿವ ಪಳನಿಸ್ವಾಮಿ, ರಾಜ್ಯದ ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ರಾವ್, ಕಾವೇರಿ ತಾಂತ್ರಿಕ ಘಟಕದ ಅಧ್ಯಕ್ಷ ಸುಬ್ರಮಣಿಯನ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics