ಪ್ರಧಾನ ಸುದ್ದಿ

ಕಾವೇರಿ ವಿವಾದ: ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಕರ್ನಾಟಕ ನಿರ್ಧಾರ

Lingaraj Badiger
ಬೆಂಗಳೂರು: ತಡವಾಗಿ ಎಚ್ಚೆತ್ತುಕೊಂಡಿರುವ ಕರ್ನಾಟಕದ ಕಾನೂನು ತಂಡ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
ನಿನ್ನೆ ಸುಪ್ರೀಂ ಕೋರ್ಟ್ ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಆದರೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಇಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಇಂದು ಕೋರ್ಟ್ ಸಮಯ ಮುಗಿದಿದ್ದರಿಂದ ಸೋಮವಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಕಾನೂನು ತಂಡ ನಿರ್ಧರಿಸಿದೆ.
ಈ ನಡುವೆ ಉದ್ದೇಶಿತ ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಯಾವೆಲ್ಲ ಸದಸ್ಯರಿರಬೇಕು ಎಂಬ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಇವತ್ತೇ ನೀಡಬೇಕಿದೆ. ಇದೆಲ್ಲದರ ಬಗ್ಗೆ ಈಗ ನಡೆಯುತ್ತಿರುವ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಜತೆಗೆ ಇಂದಿನಿಂದ ಮತ್ತೆ 6 ದಿನ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಆದರೆ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಸಿಎಂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಚರ್ಚಿಸಲು ಇಂದು ಮಧ್ಯಾಹ್ನ ಸರ್ವಪಕ್ಷ ಸಭೆ ಕರೆದಿದ್ದು, ಸಭೆಯ ಬಳಿಕ ಸಂಜೆ 6 ಗಂಟೆ ಸಂಪುಟ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.
SCROLL FOR NEXT