ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶದಂತೆ 2011ರ ಕೆಪಿಎಸ್‌ಸಿ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳಿಗೆ ನೇಮಕಾತಿ ಆದೇಶ ನೀಡದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನೇಮಕಾತಿ ಪಟ್ಟಿಗೆ ಸಮ್ಮತಿ ಸೂಚಿಸಿದ್ದ ರಾಜ್ಯ ಸರ್ಕಾರ ಹಾಗೂ ಕೆಎಟಿ ಆದೇಶ ಪ್ರಶ್ನಿಸಿ ರೇಣುಕಾಂಬಿಕೆ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ನೇಮಕಾತಿ ಆದೇಶ ನೀಡದಂತೆ ತಡೆ ನೀಡಿದೆ.
ಕೆಪಿಎಸ್ ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಆದರೆ ಸರ್ಕಾರದ ಆದೇಶದ ವಿರುದ್ಧ ಕೆಲ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ನಂತರ ಕೆಎಟಿ ಆದೇಶದಂತೆ 2011ರ ಕೆಪಿಎಸ್‌ಸಿ ನೇಮಕಾತಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿತ್ತು.