ಬೆಂಗಳೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಹಲವು ಜಲಾಶಯಗಳು ಡೆಡ್ ಸ್ಟೋರೇಜ್ ಹಂತ ತಲುಪಿವೆ. ಆದರೂ ರಾಜ್ಯದಲ್ಲಿ ಜೂನ್ 15ರವರೆಗೆ ಕುಡಿಯುವ ನೀರಿಗೆ ಯಾವುದೆ ತೊಂದರೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸೋಮವಾರ ಹೇಳಿದ್ದಾರೆ.
ಇಂದು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬೆಂಗಳೂರು ನಗರಕ್ಕೆ ಪ್ರತಿನಿತ್ಯ 600 ಕ್ಯುಸೆಕ್ ನೀರು ಅಗತ್ಯವಿದೆ. ಆದರೆ ಜೂನ್ 15 ರವರೆಗೆ ಪ್ರತಿದಿನ 800 ಕ್ಯುಸೆಕ್ ನೀರು ಪೂರೈಸಲುತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ತುಂಗಭದ್ರಾ ಜಲಾಶಯ ಹೊರತು ಬೇರೆ ಯಾವ ಜಲಾಶಯಗಳಲ್ಲಿಯೂ ‘ಡೆಡ್‌ಸ್ಟೋರೇಜ್’ ನೀರು ಬಳಸುವುದಿಲ್ಲ. ಕುಡಿಯುವ ಉದ್ದೇಶಕ್ಕೆ ‘ಲೈವ್ ಸ್ಟೋರೇಜ್’ ನೀರು ಸಾಕು ಎಂದು ಹೇಳಿದರು.
ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ 4.14 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಇದು ಜೂನ್ 15 ರವರೆಗೆ ಸಾಕಾಗಲಿದೆ ಎಂದು ಅವರು ವಿವರಿಸಿದರು.
ಬೆಂಗಳೂರು ಜಲಮಂಡಲಿ ಕೇಳಿದಂತೆ 600 ಕ್ಯುಸೆಕ್ ಜತೆ ಹೆಚ್ಚುವರಿಯಾಗಿ 200 ಕ್ಯುಸೆಕ್ ನೀರು ಒದಗಿಸಲಾಗುವುದು. ನೀರನ್ನು ‘ರೇಷನಿಂಗ್’ ಮಾಡಿ ಅಥವಾ ದಿನಬಿಟ್ಟು ದಿನ ಪೂರೈಸಿದರೆ ಮತ್ತೂ 15 ದಿನಕ್ಕೆ ನೀರಿನ ಕೊರತೆಯಾಗದು. ಈ ತೀರ್ಮಾನವನ್ನು ಜಲಮಂಡಳಿ ವಿವೇಚನೆಗೆ ಬಿಡಲಾಗಿದೆ. ‘ರೇಷನಿಂಗ್’ ಮಾಡುವಂತೆ ಸರ್ಕಾರ ಸಲಹೆ ನೀಡಿಲ್ಲ ಎಂದು ಪಾಟೀಲ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics