ವಿಜಯ್ ಮಲ್ಯ ವಿರುದ್ಧ ಮತ್ತೊಂದು ಜಾಮೀನು ರಹಿತ ಬಂಧನ ವಾರಂಟ್
ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ....
ನವದೆಹಲಿ: ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ದೆಹಲಿ ಕೋರ್ಟ್ ಬುಧವಾರ ಮತ್ತೊಂದು ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.
ವಿದೇಶೀ ವಿನಿಮಯ ಪ್ರಾಧಿಕಾರ(ಫೆರಾ)ದ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀಫ್ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಅವರು, ವಿಜಯ್ ಮಲ್ಯ ವಿರುದ್ಧ ಓಪನ್ ಎಂಡೆಡ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದಾರೆ.
ದೆಹಲಿ ಕೋರ್ಟ್ ಈ ಮುಂಚೆ ಕಳೆದ ವರ್ಷ ನವೆಂಬರ್ 4ರಂದು ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಆದರೆ ಜಾರಿ ನಿರ್ದೇಶನಾಲಯ ಅದನ್ನು ಜಾರಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಓಪನ್ ಎಂಡೆಡ್ ವಾರಂಟ್ ಹೊರಡಿಸಿದ್ದು, ಇದನ್ನು ಜಾರಿಗೊಳಿಸಲು ಕಾಲ ಮಿತಿ ಇಲ್ಲ. ಆದರೆ ಎರಡು ತಿಂಗಳೊಳಗೆ ಕ್ರಮ ತೆಗೆದುಕೊಂಡ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 8ಕ್ಕೆ ಮುಂದೂಡಿದೆ.
ವಿಜಯ್ ಮಲ್ಯ ಅವರು ವಿದೇಶದಲ್ಲಿ ತಮ್ಮ ಮದ್ಯ ಉತ್ಪನ್ನಗಳನ್ನು ಮಾರಾಟಮಾಡಲು ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. 1995 ರಲ್ಲಿ ತಮ್ಮ ಕಿಂಗ್ ಫಿಶರ್ ಉತ್ಪನ್ನಗಳನ್ನು ಪ್ರಚಾರಪಡಿಸಲು ಲಂಡನ್ ಮೂಲದ ಸಂಸ್ಥೆಯೊಂದರ ಜೊತೆಗೆ ವಿಜಯ್ ಮಲ್ಯ ಅಕ್ರಮ ಹಣಕಾಸಿನ ವ್ಯವಹಾರ ನಡೆಸಿದ್ದರು ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.
ಸಂಸ್ಥೆಗೆ ಹಣ ನೀಡುವಾಗ ಮಲ್ಯ ಭಾರತೀಯ ರಿಸರ್ವ್ ಬ್ಯಾಂಕಿನ ಒಪ್ಪಿಗೆ ಪಡೆದಿರಲಿಲ್ಲ ಎನ್ನಲಾಗಿದೆ. ಇದು ವಿದೇಶೀ ವಿನಿಮಯ ಒಪ್ಪಂದ (ಫೆರಾ)ದ ಸ್ಪಷ್ಟ ಉಲ್ಲಂಘನೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.