ಜಾಧವ್ ವಿರುದ್ಧದ ಚಾರ್ಜ್ ಶೀಟ್, ಗಲ್ಲು ಶಿಕ್ಷೆ ತೀರ್ಪಿನ ಪ್ರತಿ ನೀಡುವಂತೆ ಪಾಕ್ ಗೆ ಭಾರತ ಆಗ್ರಹ
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಮತ್ತು ಗಲ್ಲು ಶಿಕ್ಷೆಯ....
ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಮತ್ತು ಗಲ್ಲು ಶಿಕ್ಷೆಯ ತೀರ್ಪಿನ ಪ್ರತಿ ನೀಡುವಂತೆ ಶುಕ್ರವಾರ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿದೆ.
ಈ ಸಂಬಂಧ ಇಂದು ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಂಬಾವಾಲೆ ಅವರು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತೆಹ್ಮೀನಾ ಜಂಜುವಾ ಅವರನ್ನು ಭೇಟಿ ಮಾಡಿದ್ದು, ಜಾಧವ್ ವಿರುದ್ಧದ ಚಾರ್ಜ್ ಶೀಟ್ ಹಾಗೂ ಗಲ್ಲು ಶಿಕ್ಷೆಯ ತೀರ್ಪಿನಿ ಪ್ರತಿ ನೀಡುವಂತೆ ಹಾಗೂ ವಕೀಲರಿಗೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಜಂಜುವಾ ಭೇಟಿಯ ಬಳಿಕ ಮಾತನಾಡಿದ ಬಂಬಾವಾಲೆ ಅವರು, ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದ ಪ್ರಮಾಣಿಕೃತ ಜಾರ್ಜ್ ಶೀಟ್ ಪ್ರತಿ ಹಾಗೂ ಗಲ್ಲು ಶಿಕ್ಷೆಯ ಪ್ರತಿಗಳನ್ನು ನೀಡುವಂತೆ ಕೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಕುಲಭೂಷಣ್ ಜಾಧವ್ ಅವರಿಗೆ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಭಾರತ ಮಾಡಿದ ಮನವಿಯನ್ನು ಪಾಕಿಸ್ತಾನ 13 ಬಾರಿ ತಿರಸ್ಕರಿಸಿದೆ. ಈಗಲಾದರೂ ವಕೀಲರ ಭೇಟಿಗೆ ಅವಕಾಶ ನೀಡಿ, ನಾವು ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿರುವುದಾಗಿ ಬಂಬಾವಾಲೆ ತಿಳಿಸಿದ್ದಾರೆ.