ಪ್ರಧಾನ ಸುದ್ದಿ

ಕೇವಲ 9 ವರ್ಷಗಳಲ್ಲೇ ಮಿಲಿಯನೇರ್ ಆದ ಮಾಯಾವತಿ ಸಹೋದರ!

Lingaraj Badiger
ಲಖನೌ: ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜಕೀಯಕ್ಕೆ ಬಂದ ನಂತರ ಅವರ ಪೋಷಕರಿಗಾಗಿ ಹಾಗೂ ಇತರೆ ಕುಟುಂಬ ಸದಸ್ಯರಿಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.
ಮಾಯಾವತಿ ಅವರ ಸಹೋದರ 40 ವರ್ಷದ ಆನಂದ ಕುಮಾರ್ ಅವರು ಅವರು ದೊಡ್ಡ ರಾಜಕಾರಣಿಯಲ್ಲ, ಉದ್ಯಮಿಯಲ್ಲ, ಸೆಲೆಬ್ರಿಟಿ ಕೂಡ ಅಲ್ಲ. ನೊಯಿಡಾದಲ್ಲಿ ಕೇವಲ ಒಬ್ಬ ಗುಮಾಸ್ತನಾಗಿ ವೃತ್ತಿ ಜೀವನ ಆರಂಭಿಸಿ ಈಗ ಕೋಟ್ಯಾಧಿಪತಿಯಾಗಿದ್ದಾರೆ. 
2003ರಲ್ಲಿ ಮಾಯಾವತಿ ಅವರೊಂದಿಗೆ ಸೇರಿಕೊಂಡ ಈ ಆನಂದ್ ಬಿಎಸ್ಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆಯಲಿಲ್ಲ. ಆದರೆ 2007ರಲ್ಲಿ ಸರ್ಕಾರದ ಗುಮಾಸ್ತನ ಕೆಲಸಕ್ಕೆ ಗುಡ್ ಬೈ ಹೇಳಿ, ನೊಯಿಡಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ ನಂತರ ಆತನ ಅದೃಷ್ಟವೇ ಖುಲಾಯಿಸಿತ್ತು. 
2011ರಲ್ಲಿ ಮಾಧ್ಯಮಗಳು ಬಿಡುಗಡೆ ಮಾಡಿದ್ದ 26 ನಕಲಿ ಕಂಪನಿಗಳ ಒಡೆಯ ಆನಂದ್ ಕುಮಾರ್ ಆಸ್ತಿ 2007-14ರ ಅವಧಿಯಲ್ಲಿ 7.5 ಕೋಟಿಯಿಂದ 1316 ಕೋಟಿ ರುಪಾಯಿಗೆ ತಲುಪಿತ್ತು. ಇದಕ್ಕೆಲ್ಲ ಕಾರಣ ಸಹೋದರಿ, ಬಿಎಸ್ಪಿ ನಾಯಕಿ ಮಾಯಾವತಿ.
ಹೌದು, ಮಾಯಾವತಿ ಉತ್ತರಪ್ರದೇಶದ ಸಿಎಂ ಆಗಿದ್ದ ಸಮಯದಲ್ಲಿ ಸಹೋದರ ಆನಂದ್ ಕುಮಾರ್ ಕೋಟಿ ಕೋಟಿ ಸಂಪಾದನೆ ಮಾಡಿರೋದು ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ನಲ್ಲಿ ಕೋಟಿಗಟ್ಟಲೆ ಹೂಡಿಕೆ, ಶೆಲ್ ಕಂಪನಿಗಳು, ಕೋಟ್ಯಾಂತರ ರುಪಾಯಿ ಸಾಲ ಹೀಗೆ ಹತ್ತಾರು ವ್ಯವಹಾರಗಳ ಮೂಲಕ ಆನಂದ್ ಕುಮಾರ್ ಹಣ ಗಳಿಸಿರೋದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ.
ಆಕೃತಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಲ್ಲಿ ಆನಂದ್ ಕುಮಾರ್ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್ ಮಾಡಿದ್ದಾರೆ ಎನ್ನಲಾಗ್ತಾ ಇದೆ. ನಕಲಿ ಕಂಪನಿಗಳ ಹೆಸರಲ್ಲಿ ವಹಿವಾಟು ನಡೆಸಿರೋದು ಸಹ ಬಹಿರಂಗವಾಗಿದೆ. ಭಾಸ್ಕರ್ ಫಂಡ್ ಮ್ಯಾನೇಜ್ಮೆಂಟ್ ಲಿಮಿಟೆಡ್, ಕ್ಲಿಫ್ಟನ್ ಪಿಯರ್ಸನ್ ಎಕ್ಸ್ ಪೋರ್ಟ್ & ಏಜೆನ್ಸೀಸ್, ಡೆಲ್ಟನ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್, ಗಂಗಾ ಬ್ಯುಲ್ಡರ್ಸ್ ಲಿಮಿಟೆಡ್ ಹೆಸರಲ್ಲಿ ಆಕೃತಿ ಹೋಟೆಲ್ಸ್ ನಲ್ಲಿ 500150 ಶೇರುಗಳಿವೆ. ಆದ್ರೆ ಈ ಕಂಪನಿಗಳ್ಯಾವುವೂ ಅಸ್ಥಿತ್ವದಲ್ಲೇ ಇಲ್ಲ. ಇಂತಹ ಒಟ್ಟು 7 ಕಂಪನಿಗಳ ಹೆಸರಲ್ಲಿ ಮಾಯಾವತಿ ಸಹೋದರ ಹಣಕಾಸು ವ್ಯವಹಾರ ನಡೆಸಿದ್ದಾರೆ. 
ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಕೂಲಂಕುಷ ತನಿಖೆಗೆ ಮುಂದಾಗಿದ್ದು ಸದ್ಯದಲ್ಲೇ ಮಾಯಾವತಿ ಸಹೋದರನ ಅವ್ಯವಹಾರ ಬಯಲಾಗಲಿದೆ ಎನ್ನಲಾಗ್ತಿದೆ.
SCROLL FOR NEXT